ADVERTISEMENT

ಮೈತೇಯಿ ದಾಳಿಯಲ್ಲಿ ಗಾಯಗೊಂಡಿದ್ದ ಶಾಸಕ ನಿಧನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 22:30 IST
Last Updated 20 ಫೆಬ್ರುವರಿ 2026, 22:30 IST
   

ಗುವಾಹಟಿ: ಇಂಫಾಲ್‌ನಲ್ಲಿ 2023ರ ಮೇ 4ರಂದು ಮೈತೇಯಿ ಸಮುದಾಯದವರು ನಡೆಸಿದ್ದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ, ಕುಕಿ ಸಮುದಾಯ ನಾಯಕ, ಬಿಜೆಪಿ ಶಾಸಕ ವುಂಗ್‌ಜಾಗಿನ್‌ ವಾಲ್ಟೆ (64) ದೆಹಲಿಯ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.

ಕುಕಿ ಪ್ರಾಬಲ್ಯದ ಚುರಾಚಾಂದಪುರ ಜಿಲ್ಲೆಯ ಥಾನಲನ್‌ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಾಲ್ಟೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ಫೆಬ್ರುವರಿ 8ರಂದು ವಿಮಾನದ ಮೂಲಕ ನವದೆಹಲಿಗೆ ಕರೆದೊಯ್ಯಲಾಗಿತ್ತು. ಅವರು ದೆಹಲಿಗೆ ತೆರಳುವ ಮುನ್ನ ಇಂಫಾಲ್‌ ವಿಮಾನ ನಿಲ್ದಾಣದಲ್ಲಿ ನೂತನ ಮುಖ್ಯಮಂತ್ರಿ ವೈ.ಖೇಮಚಂದ್ ಸಿಂಗ್ ಅವರು ವಾಲ್ಟೆ ಅವರನ್ನು ಭೇಟಿ ಮಾಡಿದ್ದರು.

ಮಣಿಪುರದಲ್ಲಿ 2023ರ ಮೇ 3ರಂದು ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಸಂಘರ್ಷ ಆರಂಭವಾದ ಮರುದಿನವೇ ವಾಲ್ಟೆ ಅವರ ಮೇಲೆ ಹಲ್ಲೆ ನಡೆದಿತ್ತು. ಮೈತೇಯಿ ಪ್ರಾಬಲ್ಯದ ಇಂಫಾಲ್‌ನಲ್ಲಿ ಅಂದಿನ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರನ್ನು ಭೇಟಿಯಾಗಿ ಹಿಂದಿರುಗುತ್ತಿದ್ದಾಗ ಮೈತೇಯಿ ಗುಂಪಿನಿಂದ ದಾಳಿ ನಡೆದಿತ್ತು ಎಂದು ಆರೋಪಿಸಲಾಗಿದೆ. ಅವರ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.