ADVERTISEMENT

ಕುಂಭಮೇಳ: 16 ಕೋಟಿ ಯಾತ್ರಿಗಳ ಪುಣ್ಯಸ್ನಾನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 17:30 IST
Last Updated 14 ಫೆಬ್ರುವರಿ 2019, 17:30 IST
ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ಕುಂಭಮೇಳದ ಸಂಗಮದಲ್ಲಿ ಯಾತ್ರಿಗಳು ಪುಣ್ಯಸ್ನಾನ ಮಾಡಿದರು     –ಎಎಫ್‌ಪಿ ಚಿತ್ರ
ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ಕುಂಭಮೇಳದ ಸಂಗಮದಲ್ಲಿ ಯಾತ್ರಿಗಳು ಪುಣ್ಯಸ್ನಾನ ಮಾಡಿದರು     –ಎಎಫ್‌ಪಿ ಚಿತ್ರ   

ಪ್ರಯಾಗ್‌ರಾಜ್ (ಉತ್ತರಪ್ರದೇಶ): ಗಂಗೆ- ಯಮುನೆ- ಗುಪ್ತಗಾಮಿನಿ ಸರಸ್ವತಿಯ ಈ ಸಂಗಮ ಕ್ಷೇತ್ರದಲ್ಲಿ ಕುಂಭಮೇಳ ಆರಂಭವಾಗಿ ಗುರುವಾರಕ್ಕೆ ಸರಿಯಾಗಿ ಒಂದು ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಸಂಗಮದ 40 ಸ್ನಾನಘಟ್ಟಗಳಲ್ಲಿ ಸುಮಾರು 16 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ. ವ್ಯವಸ್ಥಾಪಕರ ಪ್ರಕಾರ ಇದೊಂದು ದಾಖಲೆಯಾಗಿದೆ.

ಈ ಹಿಂದೆ, 2013ರಲ್ಲಿ ಇಲ್ಲಿ 12 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದರು.ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಕೊರೆಯುವ ಚಳಿಯ ತೀವ್ರತೆಯನ್ನು ಹೆಚ್ಚಿಸಿದೆ. ಆದರೆ ನಿತ್ಯ 5 ಲಕ್ಷದಿಂದ 10 ಲಕ್ಷ ಮಂದಿ ಪುಣ್ಯಸ್ನಾನ ಮಾಡುತ್ತಿದ್ದಾರೆ ಎಂದು ಉತ್ತರಪ್ರದೇಶ ವಾರ್ತಾ ಇಲಾಖೆಯ ಹಿರಿಯ ಉಪ ನಿರ್ದೇಶಕ ವಿನೋದ್ ಕುಮಾರ್ ಪಾಂಡೆ 'ಪ್ರಜಾವಾಣಿ'ಗೆ ತಿಳಿಸಿದರು.

ಮಕರ ಸಂಕ್ರಾಂತಿಯ ದಿನ (ಜನವರಿ 14) 2.10 ಕೋಟಿ ಮಂದಿ, ಮೌನಿ ಅಮಾವಾಸ್ಯೆಯ (ಫೆಬ್ರವರಿ 4) ದಿನ 5.5 ಕೋಟಿ ಮಂದಿ, ವಸಂತ ಪಂಚಮಿ (ಫೆಬ್ರವರಿ10) ದಿನ 3 ಕೋಟಿ ಮಂದಿ ನದಿಯಲ್ಲಿ ಮಿಂದೆದಿದ್ದಾರೆ.

ADVERTISEMENT

ಇಷ್ಟೆಲ್ಲ ಯಾತ್ರಾರ್ಥಿಗಳು ಈ ತೀರ್ಥಕ್ಷೇತ್ರಕ್ಕೆ ಲಗ್ಗೆಯಿಟ್ಟಿದ್ದರೂ ನೂಕು ನುಗ್ಗಲು, ಕಾಲ್ತುಳಿತದಂಥ ಒಂದೇ ಒಂದು ಅಹಿತಕರ ಘಟನೆ ನಡೆದಿಲ್ಲ ಎಂಬುದು ಗಮನಾರ್ಹ ವಿಷಯ ಎಂದು ಹೇಳಿದರು. ಇಲ್ಲಿ ಏರ್ ಅ್ಯಂಬುಲೆನ್ಸ್ ಸೇವೆಯ ವ್ಯವಸ್ಥೆ ಮಾಡ
ಲಾಗಿದ್ದು, ಎರಡು ಬಾರಿ ಮಾತ್ರ ಬಳಕೆಯಾಗಿದೆ.

ಇದೇ 17ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು 19ರಂದು ಪ್ರಧಾನಿ ನರೇಂದ್ರ ಮೋದಿ ಕುಂಭ ಮೇಳಕ್ಕೆ ಬರಲಿದ್ದಾರೆ ಎಂದರು.

ಈ ನಡುವೆ, ಪ್ರಯಾಗ್‌ರಾಜ್ ನಲ್ಲಿ ಗುರುವಾರವೂ ಗುಡುಗಿನಿಂದ ಕೂಡಿದ ಸಾಧಾರಣ ಮಳೆಯಾಗಿದೆ. ಟೆಂಟ್‌ಗಳಲ್ಲಿ
ವಾಸ್ತವ್ಯ ಹೂಡುವುದು ಸವಾಲೆನಿಸಿದೆ. ವಿವಿಧ ಸೆಕ್ಟರ್‌ಗಳಲ್ಲಿ ಒಟ್ಟು 10 ಸಾವಿರ ಡೇರೆಗಳ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.