ADVERTISEMENT

ಕುನಾಲ್‌ ಕಾಮ್ರಾ ಟಿ–ಶರ್ಟ್‌ ವಿವಾದ: ಬಿಜೆಪಿ, ಶಿವಸೇನಾ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2025, 7:51 IST
Last Updated 26 ನವೆಂಬರ್ 2025, 7:51 IST
   

ಮುಂಬೈ: ಟಿ–ಶರ್ಟ್‌ ವಿವಾದಕ್ಕೆ ಸಂಬಂಧಿಸಿದಂತೆ ಸ್ಟ್ಯಾಂಡಪ್ ಕಾಮಿಡಿಯನ್‌ ಕುನಾಲ್ ಕಾಮ್ರಾ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಹೇಳಿದೆ.

ಆರ್‌ಎಸ್‌ಎಸ್‌ ಅನ್ನು ಅಪಹಾಸ್ಯ ಮಾಡುವ ಟಿ–ಶರ್ಟ್‌ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡಿರುವ ಕಾಮ್ರಾ, ಆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಟಿ–ಶರ್ಟ್‌ನಲ್ಲಿ ಆರ್‌ಎಸ್‌ಎಸ್‌ ಎಂದು ಬರೆದಿರುವ ಅಕ್ಷರದ ಮೇಲೆ ನಾಯಿಯೊಂದು ಮೂತ್ರ ಮಾಡುತ್ತಿರುವಂತೆ ಚಿತ್ರಿಸಲಾಗಿದೆ.

ವಿವಾದದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ ಚಂದ್ರಶೇಖರ್ ಬವಾಂಕುಲೆ, ಆಕ್ಷೇಪಾರ್ಹ ವಿಷಯವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಶಿವಸೇನಾ(ಶಿಂದೆ ಬಣ) ನಾಯಕ ಸಂಜಯ್ ಶಿರ್ಸಾತ್ ಪ್ರತಿಕ್ರಿಯಿಸಿ, ‘ಈ ಹಿಂದೆ ಅವರು(ಕಾಮ್ರಾ) ಪ್ರಧಾನಿ ಮೋದಿ ಮತ್ತು ಏಕನಾಥ್ ಶಿಂದೆ ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದರು. ಈಗ ಆರ್‌ಎಸ್‌ಎಸ್‌ ಮೇಲೆ ನೇರವಾಗಿ ದಾಳಿ ಮಾಡುವ ಧೈರ್ಯ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಬೇಕಿದೆ’ ಎಂದಿದ್ದಾರೆ.

ಇದೇ ವರ್ಷ ಮಾರ್ಚ್‌ನಲ್ಲಿ ನಡೆದ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಕಾಮ್ರಾ, ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂದೆ ಕುರಿತು ಹಾಸ್ಯ ಮಾಡಿದ್ದರು. ಇದು ವಿವಾದ ರೂಪ ಪಡೆದುಕೊಂಡಿದ್ದು, ಶಿಂದೆ ಬೆಂಬಲಿಗರು ಕಾರ್ಯಕ್ರಮ ನಡೆದ ಸ್ಥಳಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು.

ಏನತ್ಮಧ್ಯೆ, ಹೊಸ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಕಾಮ್ರಾ, ‘ಇದು ಕಾಮಿಡಿ ಕ್ಲಬ್‌ನಲ್ಲಿ ಕ್ಲಿಕ್ಕಿಸಿರುವ ಫೋಟೊವಲ್ಲ’ ಎಂದು ಹೇಳಿದ್ದಾರೆ.