ADVERTISEMENT

Kurnool Bus Tragedy | ಹೆದ್ದಾರಿಯಲ್ಲಿ ಹೊತ್ತಿ ಉರಿದ ಬಸ್‌: 20 ಮಂದಿ ಸಜೀವ ದಹನ

ಕರ್ನೂಲು ಜಿಲ್ಲೆಯ ಚಿನ್ನತೇಕೂರು ಬಳಿ ಅವಘಡ l ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಬಸ್

ಪಿಟಿಐ
Published 24 ಅಕ್ಟೋಬರ್ 2025, 2:11 IST
Last Updated 24 ಅಕ್ಟೋಬರ್ 2025, 2:11 IST
   

ಕರ್ನೂಲು (ಆಂಧ್ರಪ್ರದೇಶ): ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್ ಎ.ಸಿ ಬಸ್‌ವೊಂದು ಅಪಘಾತದಲ್ಲಿ ಬೆಂಕಿ ಹೊತ್ತಿ ಉರಿದಿದ್ದರಿಂದ 20 ಮಂದಿ ಸಜೀವ ದಹನಗೊಂಡ ಘಟನೆ ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ ಶುಕ್ರವಾರ ನಡೆದಿದೆ.

ಮುಂದಿದ್ದ ಬೈಕ್‌ಅನ್ನು ಹಿಂದಿಕ್ಕಲು ಚಾಲಕ ಯತ್ನಿಸಿದಾಗ ಬೈಕ್‌ಗೆ ಬಸ್‌ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ. ಬಸ್‌ನಲ್ಲಿದ್ದವರ ಪೈಕಿ 19 ಪ್ರಯಾಣಿಕರು ಸಜೀವ ದಹನಗೊಂಡರೆ, ಘಟನೆಯಲ್ಲಿ ಬೈಕ್‌ ಸವಾರ ಕೂಡ ಮೃತಪಟ್ಟಿದ್ದಾರೆ. 

ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದೀಪಾವಳಿಗಾಗಿ ಹೈದರಾಬಾದ್‌ ಹಾಗೂ ಇತರ ಸ್ಥಳಗಳಿಗೆ ತೆರಳಿದ್ದವರು, ಹಬ್ಬ ಮುಗಿಸಿಕೊಂಡು ಬಸ್‌ನಲ್ಲಿ ಬೆಂಗಳೂರಿಗೆ ವಾಪಸಾಗುತ್ತಿದ್ದರು.

ADVERTISEMENT

ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಮೃತರ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದ್ದು, ವಿಧಿವಿಜ್ಞಾನ ತಜ್ಞರ ತಂಡವೊಂದು ಘಟನಾ ಸ್ಥಳಕ್ಕೆ ತೆರಳಿ ಮಾದರಿಗಳನ್ನು ಸಂಗ್ರಹಿಸಿದೆ. 

ರಾತ್ರಿ ವೇಳೆ ಅವಘಡ ಸಂಭವಿಸಿದ್ದರಿಂದ ಪ್ರಯಾಣಿಕರು ಗಾಢನಿದ್ರೆಯಲ್ಲಿದ್ದರು. ಹೀಗಾಗಿ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗಲು ಇದು ಕೂಡ ಒಂದು ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಹ ದುರ್ಘಟನೆ ಕುರಿತು ದುಃಖ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ:

ಕರ್ನೂಲು ನಗರದಿಂದ 20 ಕಿ.ಮೀ. ದೂರದಲ್ಲಿರುವ, ಚಿನ್ನತೇಕೂರ ಗ್ರಾಮದ ಸಮೀಪದ ಉಲಿಂದಕೊಂಡ ಕ್ರಾಸ್‌ ಬಳಿ ನಸುಕಿನ 3.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

‘ವಿ.ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಬಸ್‌, ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿತ್ತು. ಈ ವೇಳೆ, ಬೈಕ್‌ಅನ್ನು ಹಿಂದಿಕ್ಕಲು ಚಾಲಕ ಯತ್ನಿಸಿದಾಗ, ಅದಕ್ಕೆ ಡಿಕ್ಕಿಯಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬಸ್‌ ಅಡಿಗೆ ಬೈಕ್‌ ಬಿದ್ದು, ಸಿಕ್ಕಿ ಹಾಕಿಕೊಂಡಿತ್ತು. ಅದನ್ನು ಚಾಲಕ ಗಮನಿಸಿಲ್ಲ. ಹಿಟ್‌ ಅಂಡ್ ರನ್‌ ಪ್ರಕರಣವಾಗುವುದನ್ನು ತಪ್ಪಿಸುವುದಕ್ಕಾಗಿ, ಚಾಲಕ ಬಸ್‌ ನಿಲ್ಲಿಸಿಲ್ಲ. ಅಲ್ಲದೇ, ಬೈಕ್‌ ಸಮೇತ ಸವಾರನನ್ನು 200 ಮೀಟರ್‌ ವರೆಗೆ ಎಳೆದುಕೊಂಡೇ ಹೋಗಿದ್ದಾನೆ ಎಂಬ ಸಂಶಯ ಇದೆ’ ಎಂದು ಹೇಳಿದ್ದಾರೆ.

ಈ ವೇಳೆ, ಉಂಟಾದ ಘರ್ಷಣೆಯಿಂದಾಗಿ ಕಿಡಿ ಹೊತ್ತಿದೆ. ಬಳಿಕ ಬೈಕ್‌ನ ಇಂಧನ ಟ್ಯಾಂಕ್‌ ಸ್ಫೋಟಗೊಂಡು ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ’ ಎಂದೂ ಅವರು ಹೇಳಿದ್ದಾರೆ.

‘ಅದೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು, ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದನ್ನು ನೋಡಿ, ಚಾಲಕನ ಗಮನಕ್ಕೆ ತಂದಿದ್ದಾರೆ. ಅಷ್ಟರೊಳಗೆ ಬೆಂಕಿಯು ಇಡೀ ಬಸ್‌ಗೆ ವ್ಯಾಪಿಸಿತ್ತು’ ಎಂದು ವಿವರಿಸಿದ್ದಾರೆ.

‘ಬಸ್‌ನಲ್ಲಿದ್ದ ಅಗ್ನಿಶಾಮಕ ಸಾಧನ ಬಳಿಸಿ, ಬೆಂಕಿ ನಂದಿಸಲು ಚಾಲಕ ಪ್ರಯತ್ನಿಸಿದ್ದಾನೆ. ಬೆಂಕಿಯ ತೀವ್ರತೆಯನ್ನು ಗಮನಿಸಿದ ಬಳಿಕ ಆತ, ಸ್ಥಳದಿಂದ ಕಾಲ್ಕಿತ್ತಿದ್ದಾನೆ’ ಎಂದು ಅಧಿಕಾರಿ ಹೇಳಿದ್ದಾರೆ.

44 ಜನರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕರು ಸೇರಿ 27 ಮಂದಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಗೃಹ ಸಚಿವೆ ವಿ.ಅನಿತಾ ತಿಳಿಸಿದ್ದಾರೆ.

‘ಬಸ್‌ನಿಂದ 19 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಬೈಕ್‌ ಸವಾರನ ಮೃತದೇಹವನ್ನು ಶವಾಗಾರದಲ್ಲಿಡಲಾಗಿದೆ’ ಎಂದು ಕರ್ನೂಲು ವಲಯದ ಡಿಐಜಿ ಕೋಯಾ ಪ್ರವೀಣ ತಿಳಿಸಿದ್ದಾರೆ.

‘ಪಾರಾಗಿರುವ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಅಪಾಯ ಇಲ್ಲ’ ಎಂದು ಜಿಲ್ಲಾಧಿಕಾರಿ ಎ.ಸಿರಿ ಹೇಳಿದ್ದಾರೆ.

ಪರಿಹಾರ:

‘ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ಬಸ್‌ಗೆ ಬೆಂಕಿ ಹೊತ್ತಿ ಸಂಭವಿಸಿದ ಅವಘಡದಲ್ಲಿ ಮೃತಪಟ್ಟರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರ ನೀಡಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ತೆಲಂಗಾಣ ಸರ್ಕಾರ ಕೂಡ ಪರಿಹಾರ ಘೋಷಿಸಿದೆ. ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ, ಗಾಯಾಳುಗಳಿಗೆ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಾರಿಗೆ ಸಚಿವ ಪೊನ್ನಮ್ ಪ್ರಭಾಕರ ತಿಳಿಸಿದ್ದಾರೆ.

ಅವಘಡಕ್ಕೆ ಕಾರಣವಾದ ಅಂಶಗಳ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ. ಒಬ್ಬ ಚಾಲಕ ತಲೆ ಮರೆಸಿಕೊಂಡಿದ್ದಾರೆ
ವಿಕ್ರಾಂತ ಪಾಟೀಲ ಕರ್ನೂಲು ಎಸ್‌ಪಿ
ಕರ್ನೂಲಿನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಹಲವರು ಮೃತಪಟ್ಟಿರುವ ಸಂಗತಿ ದುರದೃಷ್ಟಕರ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ
ನರೇಂದ್ರ ಮೋದಿ ಪ್ರಧಾನಿ

ಸಹಾಯವಾಣಿ:

ಪ್ರಯಾಣಿಕರ ಸಂಬಂಧಿಕರ ನೆರವಿಗಾಗಿ ತೆಲಂಗಾಣ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ. ಎಂ.ಶ್ರೀರಾಮಚಂದ್ರ (9912919545) ಇ.ಚಿಟ್ಟಿಬಾಬು (9440854433) ಅವರನ್ನು ಸಂ‍ಪರ್ಕಿಸಬಹುದು.

ಪ್ರಮುಖ ಅಂಶಗಳು

  • ಬಹುತೇಕ ಪ್ರಯಾಣಿಕರು ಹೈದರಾಬಾದ್‌ನವರಾಗಿದ್ದು 25ರಿಂದ 35 ವರ್ಷ ವಯೋಮಾನದವರು

  • ಗಾಯಾಳುಗಳಿಗೆ ಕರ್ನೂಲು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ

  • ಮೃತ ಪ್ರಯಾಣಿಕರ ಪೈಕಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ತಲಾ 6 ಮಂದಿ ಒಡಿಶಾ ಬಿಹಾರದ ತಲಾ  ಒಬ್ಬರು ತಮಿಳುನಾಡು ಹಾಗೂ ಕರ್ನಾಟಕದ ತಲಾ ಇಬ್ಬರು ಇದ್ದಾರೆ. ಒಬ್ಬರ ಗುರುತು ಪತ್ತೆಯಾಗಿಲ್ಲ

  • ವೈದ್ಯರ ತಂಡವೊಂದು ಘಟನಾ ಸ್ಥಳಕ್ಕೆ ತೆರಳಿದ್ದು ಡಿಎನ್‌ಎ ಪರೀಕ್ಷೆಗಾಗಿ ಮೃತದೇಹಗಳಿಂದ ಮಾದರಿಗಳನ್ನು ಸಂಗ್ರಹಿಸಿದೆ

  • ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ನೆರವು ನೀಡುವಂತೆ ನೆರೆಯ ಗದ್ವಾಲ್‌ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಸೂಚನೆ

ಮುಂಬೈ: ಸಮೃದ್ಧಿ ಕಾರಿಡಾರ್‌ನಲ್ಲಿಯೂ ನಡೆದಿತ್ತು ಇಂಥದೇ ಅವಘಡ

ಮಹಾರಾಷ್ಟ್ರದ ವಿದರ್ಭ ಪ್ರದೇಶದ ಬುಲ್ಧಾನ ಜಿಲ್ಲೆ ಮೂಲಕ ಹಾದುಹೋಗುವ ಸಮೃದ್ಧಿ ಕಾರಿಡಾರ್‌ನಲ್ಲಿ ಕೂಡ ಬಸ್‌ವೊಂದು ಬೆಂಕಿ ಆಕಸ್ಮಿಕದಲ್ಲಿ ಹೊತ್ತಿ ಉರಿದಿತ್ತು. 2023ರ ಜುಲೈ 1ರಂದು ನಡೆದ ದುರ್ಘಟನೆಯಲ್ಲಿ 26 ಜನರು ಸಜೀವ ದಹನವಾಗಿದ್ದರು. ನಾಗ್ಪುರದಿಂದ ಪುಣೆಗೆ ಹೊರಟಿದ್ದ ವಿದರ್ಭ ಟ್ರಾವೆಲ್ಸ್‌ನ ಎ.ಸಿ ಲಕ್ಷುರಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ನಿದ್ರೆ ಮಂಪರಿನಿಂದಾಗಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದ. ಆಗ ಬಸ್‌ ಕಂಬಕ್ಕೆ ನಂತರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಇಂಧನ ಟ್ಯಾಂಕ್ ಸ್ಫೋಟಗೊಂಡ ಕಾರಣ ಬಸ್‌ ಸುಟ್ಟು ಹೋಗಿತ್ತು. ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಹೊರಟಿದ್ದ ಖಾಸಗಿ ಬಸ್‌ವೊಂದಕ್ಕೆ ಅಕ್ಟೋಬರ್‌ 14ರಂದು  ಬೆಂಕಿ ಹೊತ್ತಿಕೊಂಡ ಪರಿಣಾಮ 20 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದರು. ಈ ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದರು. ಶಾರ್ಟ್‌ ಸರ್ಕೀಟ್‌ನಿಂದ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು.

ತನಿಖೆ:
ಸಮಿತಿ ರಚಿಸಿದ ಆಂಧ್ರ ಕರ್ನೂಲು ಜಿಲ್ಲೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 20 ಮಂದಿ ಮೃತಪಟ್ಟ ಘಟನೆ ಕುರಿತು ತನಿಖೆ ನಡೆಸಲು ಆಂಧ್ರಪ್ರದೇಶ ಸರ್ಕಾರ ಉನ್ನತಾಧಿಕಾರ ಸಮಿತಿಯೊಂದನ್ನು ಶುಕ್ರವಾರ ರಚಿಸಿದೆ. ರಸ್ತೆ ಮತ್ತು ಸಾರಿಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಸಮಿತಿ ಒಳಗೊಂಡಿದೆ. ಸಮಿತಿ ನೀಡುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವೆ ವಿ.ಅನಿತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಜಾಗರೂಕ ಚಾಲನೆ: ₹23120 ದಂಡ ಪಾವತಿ ಬಾಕಿ

ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿ ಅಗ್ನಿ ಅವಘಡದಲ್ಲಿ ಸುಟ್ಟು ಹೋಗಿರುವ ಈ ಬಸ್‌ ವಿರುದ್ಧ 16 ಚಲನ್‌ಗಳು ಬಾಕಿ ಇವೆ ಎಂದು ಗೊತ್ತಾಗಿದೆ. ಅಜಾಗರೂಕ ಮತ್ತು ಅಪಾಯಕಾರಿ ಚಾಲನೆಗೆ ಸಂಬಂಧಿಸಿದ ₹23120 ದಂಡ ಪಾವತಿ ಬಾಕಿ ಇದೆ. ಬಸ್‌ನ ನೋಂದಣಿ ಸಂಖ್ಯೆ ಡಿಡಿ01 ಎನ್‌9490 ಇದ್ದು  2018ರ ಮೇ 2ರಂದು ದಮನ್‌ ಮತ್ತು ದಿಯುವಿನಲ್ಲಿ ಪ್ರವಾಸಿ ವಾಹನ ಪರವಾನಗಿ ನೀಡಲಾಗಿದೆ. ಪರವಾನಗಿ ಅವಧಿ 2030ರ ಏಪ್ರಿಲ್‌ 30ರ ವರೆಗೆ ಇದೆ. 2027ರ ಮಾರ್ಚ್ 31ರ ವರೆಗೆ  ಉತ್ತಮ ಸ್ಥಿತಿಯಲ್ಲಿರುವ ಬಗ್ಗೆ ಪ್ರಮಾಣಪತ್ರ ಹಾಗೂ 2026ರ ಏಪ್ರಿಲ್ 20ರ ವರೆಗೆ ವಿಮೆ ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.