ADVERTISEMENT

ಕಾರ್ಮಿಕ ಸಂಹಿತೆ: ರಾಜ್ಯ ಸರ್ಕಾರದ ವಿರುದ್ಧ ಖರ್ಗೆಗೆ ಪತ್ರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 15:59 IST
Last Updated 7 ಫೆಬ್ರುವರಿ 2026, 15:59 IST
ಎಳಮರಂ ಕರೀಂ
ಎಳಮರಂ ಕರೀಂ   

ನವದೆಹಲಿ: ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಕೇಂದ್ರದ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ಮುಂದಾಗಿದೆ ಎಂದು ಆರೋಪಿಸಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಳಮರಂ ಕರೀಂ ಅವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಖರ್ಗೆ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸರ್ಕಾರದ ಪ್ರಯತ್ನಕ್ಕೆ ತಡೆ ನೀಡಬೇಕೆಂದೂ ಅವರು ಕೋರಿದ್ದಾರೆ.

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೂಪಿಸಿದ ಜನ ವಿರೋಧಿ ನೀತಿಗಳನ್ನು ವಿರೋಧಿಸುವಲ್ಲಿ ಕಾಂಗ್ರೆಸ್‌ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳು ಒಟ್ಟಾಗಿ ದೇಶದ ಕಾರ್ಮಿಕ ವಲಯದ ಪರವಾಗಿ ನಿಂತಿವೆ. ಆದರೆ, ರಾಜ್ಯ ಸರ್ಕಾರವು ಅದೇ ನೀತಿಗಳನ್ನು ಜಾರಿಗೊಳಿಸಲು ಕರಡು ನಿಯಮಗಳನ್ನು ಪ್ರಕಟಿಸಿದೆ. ಈ ನಡೆ ಅತ್ಯಂತ ಕಳವಳಕಾರಿ ಹಾಗೂ ವಿಷಾದಕರ’ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಜತೆಗೆ, ‘ರಾಜ್ಯದ ನಿರ್ಧಾರವು ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಒಗ್ಗಟ್ಟಿನ ಹೋರಾಟದ ವಿರುದ್ಧದ ನಡೆಯಾಗಿದೆ. ಕಾರ್ಮಿಕ ವರ್ಗವು ಇದನ್ನು ದ್ರೋಹವೆಂದೇ ಪರಿಗಣಿಸುತ್ತದೆ. ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಾವು ಮಧ್ಯಪ್ರವೇಶಿಸಿ ಕರಡು ನಿಯಮಗಳನ್ನು ರಾಜ್ಯ ಸರ್ಕಾರ ಹಿಂಪಡೆಯುವಂತೆ ಅಥವಾ ಸ್ಥಗಿತಗೊಳಿಸುವಂತೆ ಖಾತರಿಪಡಿಸಿಕೊಳ್ಳಬೇಕು’ ಎಂದೂ ಕರೀಂ ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.