ADVERTISEMENT

ಲಡಾಖ್‌ | 6ನೇ ಪರಿಚ್ಛೇದ ಸ್ಥಾನಮಾನ ವಾಗ್ದಾನ ತಿರಸ್ಕರಿಸಿದ BJP: ಕಾಂಗ್ರೆಸ್ ಆರೋಪ

ಪಿಟಿಐ
Published 13 ಅಕ್ಟೋಬರ್ 2025, 6:11 IST
Last Updated 13 ಅಕ್ಟೋಬರ್ 2025, 6:11 IST
<div class="paragraphs"><p>19ನೇ ಕುಶೋಕ್ ಬಕುಲ ರಿನ್‌ಪೋಚೆ</p></div>

19ನೇ ಕುಶೋಕ್ ಬಕುಲ ರಿನ್‌ಪೋಚೆ

   

ಎಕ್ಸ್ ಚಿತ್ರ

ನವದೆಹಲಿ: ‘ದೇಶದ ಚಿಕಿತ್ಸಕ ಸ್ಪರ್ಶದ ನಿರೀಕ್ಷೆಯಲ್ಲಿರುವ ಲಡಾಖ್‌ಗೆ ಈ ಹಿಂದೆ ಕೌನ್ಸಿಲ್‌ ಚುನಾವಣೆ ಸಂದರ್ಭದಲ್ಲಿ ನೀಡಿದ್ದ 6ನೇ ಪರಿಚ್ಛೇಧ ಸ್ಥಾನಮಾನ ವಾಗ್ದಾವನ್ನು ಈಡೇರಿಸಲು ಬಿಜೆಪಿ ಈಗ ತಿರಸ್ಕರಿಸಿದೆ’ ಎಂದು ಕಾಂಗ್ರೆಸ್‌ ಸೋಮವಾರ ಆರೋಪಿಸಿದೆ.

ADVERTISEMENT

ಮಂಗೋಲಿಯನ್ ಅಧ್ಯಕ್ಷ ಖುರೇಲ್ಸುಖ್ ಉಖ್ನಾ ಅವರ ಭಾರತ ಭೇಟಿಗೂ ಮುನ್ನ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಈ ಹೇಳಿಕೆ ನೀಡಿದ್ದಾರೆ.

ನಾಲ್ಕು ದಿನಗಳ ಭೇಟಿ ಸಂದರ್ಭದಲ್ಲಿ ಖುರೇಲ್ಸುಖ್ ಅವರು ಇಂಧನ, ಗಣಿಗಾರಿಕೆ ಮತ್ತು ರಕ್ಷಣೆ ವಿಷಯ ಕುರಿತು ಉನ್ನತ ಮಟ್ಟದ ಚರ್ಚೆ ನಡೆಸಲಿದ್ದಾರೆ. ಈ ಭೇಟಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಖುರೇಲ್ಸುಖ್‌ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗೋಲಿಯಾದ ಅಧ್ಯಕ್ಷ ಖುರೇಲ್ಸುಖ್ ಉಖ್ನಾ ಅವರು ತಮ್ಮ ಉನ್ನತ ಮಟ್ಟದ ನಿಯೋಗದೊಂದಿಗೆ ಸೋಮವಾರ ನವದೆಹಲಿಗೆ ಬಂದಿಳಿಯಲಿದ್ದಾರೆ. ಎರಡೂ ದೇಶಗಳ ನಡುವಿನ ಪಾಲುದಾರಿಕೆಯು ರಕ್ಷಣೆ ಮತ್ತು ಭದ್ರತೆ, ಇಂಧನ, ಗಣಿಗಾರಿಕೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾಂಸ್ಕೃತಿಕ ಸಹಕಾರದಂತಹ ಕ್ಷೇತ್ರಗಳಲ್ಲಿ ವ್ಯಾಪಿಸಿದೆ.

ಮಂಗೋಲಿಯಾದ ರಾಯಭಾರಿಯಾಗಿದ್ದ ಲಢಾಕ್‌ನ ಮೆಚ್ಚಿನ ವ್ಯಕ್ತಿ

ಮಂಗೋಲಿಯಾ ರಾಯಭಾರಿಯಾಗಿ ಹತ್ತು ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿದ, ಬೌದ್ಧ ಸನ್ಯಾಸಿ ಮತ್ತು ಲಡಾಖ್‌ನ ಅಚ್ಚುಮೆಚ್ಚಿನ ವ್ಯಕ್ತಿ 19ನೇ ಕುಶೋಕ್ ಬಕುಲ ರಿನ್‌ಪೋಚೆ ಅವರ ಕೊಡುಗೆಯನ್ನು ರಮೇಶ್ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

‘ಅಕ್ಟೋಬರ್ 1961ರಲ್ಲಿ ಮಂಗೋಲಿಯಾ ರಾಷ್ಟ್ರವನ್ನು ವಿಶ್ವಸಂಸ್ಥೆಗೆ ಸೇರಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತು. 1989ರ ಅಕ್ಟೋಬರ್‌ನಲ್ಲಿ ಭಾರತದ ರಾಯಭಾರಿಯಾಗಿ 19ನೇ ಕುಶೋಕ್ ಬಕುಲಾ ರಿನ್‌ಪೋಚೆ ಅವರನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ನೇಮಿಸಿದರು. ಇದು ಭಾರತ ಮತ್ತು ಮಂಗೋಲಿಯಾ ನಡುವಿನ ಸಂಬಂಧದಲ್ಲಿ ಮಹತ್ವದ ತಿರುವು ಪಡೆಯಿತು’ ಎಂದಿದ್ದಾರೆ.

ರಿನ್‌ಪೋಚೆ ಅವರ ಹೆಸರನ್ನು ಲೇಹ್‌ ವಿಮಾನ ನಿಲ್ದಾಣಕ್ಕೆ ಹಿಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಇಟ್ಟರು. ಜತೆಗೆ ‘ಆಧುನಿಕ ಲಡಾಖ್‌ನ ಶಿಲ್ಪಿ’ ಎಂದು ಬಣ್ಣಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

‘ಉಭಯ ರಾಷ್ಟ್ರಗಳ ನಡುವಿನ ಸಂಬಂಧ 1955ರಿಂದಲೇ ಇದೆ. 1990ರಲ್ಲಿ ರಿನ್‌ಪೋಚೆ ಅವರು ಮಂಗೋಲಿಯಾದ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡರು. ಬೌದ್ಧ ಸನ್ಯಾಸಿಯಾಗಿದ್ದ ಅವರ ಕುರಿತು ಜನರಲ್ಲಿ ಅಪಾರ ಗೌರವವಿತ್ತು. ಜತೆಗೆ ಲಡಾಖ್‌ನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದರು. 1990ರಲ್ಲಿ ಕಮ್ಯುನಿಸಂ ಕೊನೆಗೊಂಡ ನಂತರ ಬೌದ್ಧ ಆಚರಣೆಯನ್ನು ಮರುಶೋಧಿಸಲು ರಿನ್‌ಪೋಚೆ ಅವರು ಮಂಗೋಲಿಯಾಗೆ ನೆರವಾದರು. ಹೀಗಾಗಿ ಅವರು ಮಂಗೋಲಿಯಾದಲ್ಲೂ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ’ ಎಂದು ಜೈರಾಮ್‌ ಹೇಳಿದ್ದಾರೆ.

‘ಮಂಗೋಲಿಯಾದಲ್ಲಿ ಮಾತ್ರವಲ್ಲ, ಅಂದಿನ ಯುಎಸ್‌ಎಸ್‌ಆರ್‌ ಹಾಗೂ ಭಾರತದಲ್ಲೂ ಬೌದ್ಧಧರ್ಮದ ಪುನರುಜ್ಜೀವನದಲ್ಲಿ ಅವರ ಕೊಡುಗೆ ಬಹುದೊಡ್ಡದು. 19ನೇ ಕುಶೋಕ್ ಬಕುಲ ರಿನ್‌ಪೋಚೆ ಅವರ ಆ ಚಿಕಿತ್ಸಕ ಸ್ಪರ್ಶವನ್ನು ಲಡಾಖ್‌ ಇಂದು ಇಡೀ ದೇಶದಿಂದ ನಿರೀಕ್ಷಿಸುತ್ತಿದೆ. ಜತೆಗೆ ಸಂವಿಧಾನದ 6ನೇ ಪರಿಚ್ಛೇಧದ ಅಡಿ ರಕ್ಷಣೆ ನೀಡುವುದಾಗಿ 2020ರಲ್ಲಿ ನಡೆದ ಸ್ಥಳೀಯ ಕೌನ್ಸಿಲ್ ಚುನಾವಣೆ ಸಂದರ್ಭದಲ್ಲಿ ವಾಗ್ದಾನ ಈಡೇರಿಸಲು ಆಡಳಿತಾರೂಢ ಬಿಜೆಪಿ ಈಗ ನಿರಾಕರಿಸಿರುವುದೂ ಅಲ್ಲಿನ ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ’ ಎಂದು ರಮೇಶ್ ಹೇಳಿದ್ದಾರೆ.

6ನೇ ಪರಿಚ್ಛೇಧ ಜಾರಿಗೆ ಪಟ್ಟು ಹಿಡಿದು ಎಲ್‌ಬಿಎ ಮತ್ತು ಕಾರ್ಗಿಲ್ ಡೆಮಾಕ್ರಟಿಕ್‌ ಅಲಯನ್ಸ್‌ (ಕೆಡಿಎ) ಜತೆಗೂಡಿ ಸೆ. 24ರಿಂದ ನಡೆಸಿದ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆದಿತ್ತು. ಈ ಸಂದರ್ಭದಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್‌ ಅವರ ಪ್ರತಿಭಟನೆ ಹಾಗೂ ಬಂಧನವೂ ನಡೆಯಿತು. ರಾಷ್ಟ್ರದ ಭದ್ರತಾ ಕಾಯ್ದೆಯ ನೆಪವೊಡ್ಡಿ ಅವರ ಬಂಧನವಾಗಿದ್ದನ್ನು ವಿರೋಧ ಪಕ್ಷಗಳು ಖಂಡಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.