ಲೇಹ್ ಬಂದ್ ಸಂದರ್ಭದಲ್ಲಿ ದುಷ್ಕರ್ಮಿಗಳು ಕಟ್ಟಡವೊಂದಕ್ಕೆ ಬೆಂಕಿ ಇಟ್ಟಿದ್ದರಿಂದ ದಟ್ಟ ಹೊಗೆ ಆವರಿಸಿತ್ತು
–ಪಿಟಿಐ ಚಿತ್ರ
ಶ್ರೀನಗರ: ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಸಂಘಟನೆಗಳು ತಮ್ಮ ನಿಲುವನ್ನು ಇನ್ನಷ್ಟು ಬಿಗಿಗೊಳಿಸಿವೆ. ಲೇಹ್ ಅಪೆಕ್ಸ್ ಬಾಡಿ (ಎಬಿಎಲ್) ಸಂಘಟನೆಯು ಕೇಂದ್ರ ಗೃಹ ಸಚಿವಾಲಯದ ಜತೆಗಿನ ಮಾತುಕತೆಯಿಂದ ಹಿಂದೆ ಸರಿದಿದೆ.
ಪರಿಸರ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕಾರ್ಗಿಲ್ ಪ್ರಜಾಸತ್ತಾತ್ಮಕ ಒಕ್ಕೂಟ (ಕೆಡಿಎ) ಒತ್ತಾಯಿಸಿದೆ.
ಪ್ರಜಾಸತ್ತಾತ್ಮಕವಾಗಿ ನಡೆಸುತ್ತಿರುವ ಚಳವಳಿಯನ್ನು ಅಪರಾಧ ಎಂಬಂತೆ ಬಿಂಬಿಸುತ್ತಿರುವ ಕಾರಣ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಎಬಿಎಲ್ ಸೋಮವಾರ ಹೇಳಿದೆ. ಅಕ್ಟೋಬರ್ 6ರಂದು ನವದೆಹಲಿಯಲ್ಲಿ ನಿಗದಿಪಡಿಸಿದ್ದ ಮಾತುಕತೆಯಿಂದ ಹಿಂದೆ ಸರಿದಿರುವುದಕ್ಕೆ ಮೂರು ಕಾರಣಗಳನ್ನು ನೀಡಿದೆ.
‘ವಾಂಗ್ಚೂಕ್ ಅವರ ಬಂಧನ, ಪ್ರತಿಭಟನೆಯನ್ನು ‘ರಾಷ್ಟ್ರವಿರೋಧಿ’ ಎಂದು ಕರೆದಿರುವುದು ಹಾಗೂ ಲೇಹ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗುಂಡಿನ ನಾಲ್ವರು ಬಲಿಯಾಗಿರುವುದನ್ನು ಖಂಡಿಸಿ ಮಾತುಕತೆಯಿಂದ ಹಿಂದೆ ಸರಿಯುತ್ತಿದ್ದೇವೆ’ ಎಂದು ಹೇಳಿದೆ.
‘ಶಾಂತಿಯುತ ಬೇಡಿಕೆಗಳಿಗೆ ಜೈಲು ಮತ್ತು ಗುಂಡುಗಳಿಂದ ಪ್ರತಿಕ್ರಿಯಿಸುವ ಮೂಲಕ ಕೇಂದ್ರವು ಲಡಾಖ್‌ನ ಜನರ ನಂಬಿಕೆಗೆ ದ್ರೋಹ ಬಗೆದಿದೆ’ ಎಂದು ಎಬಿಎಲ್ ನಾಯಕರೊಬ್ಬರು ಹೇಳಿದ್ದಾರೆ.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಕಳೆದ ಬುಧವಾರ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರ ಗುಂಡಿಗೆ ನಾಲ್ವರು ಮೃತಪಟ್ಟಿದ್ದರು. ಹಿಂಸಾಚಾರದಲ್ಲಿ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಾಗ್ಚೂಕ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.