ADVERTISEMENT

ಗಡಿ ಬಿಕ್ಕಟ್ಟು ಶಮನಕ್ಕೆ ಮತ್ತೆ ಕಮಾಂಡರ್ ಮಟ್ಟದ ಸಭೆ

ಪಿಟಿಐ
Published 12 ಅಕ್ಟೋಬರ್ 2020, 20:30 IST
Last Updated 12 ಅಕ್ಟೋಬರ್ 2020, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗಡಿ ಬಿಕ್ಕಟ್ಟನ್ನು ಬಗೆಹರಿಸಲು ಪೂರ್ವ ಲಡಾಖ್‌ನ ಎಲ್ಲ ಘರ್ಷಣೆಯ ಸ್ಥಳಗಳಿಂದ ಚೀನಾ ಸೇನೆ ಯೋಧರು ಶೀಘ್ರದಲ್ಲೇ ಹಿಂದಕ್ಕೆ ಸರಿಯಬೇಕು ಹಾಗೂ ಏಪ್ರಿಲ್‌ಗೂ ಮುಂಚಿತವಿದ್ದ ಯಥಾಸ್ಥಿತಿಯನ್ನು ಪಾಲಿಸಬೇಕು ಎಂದು ಭಾರತವು ಚೀನಾಗೆ ಒತ್ತಾಯಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪೂರ್ವ ಲಡಾಖ್‌ನಲ್ಲಿವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಭಾರತದ ಭಾಗದ ಚುಶೂಲ್‌ ಪ್ರದೇಶದಲ್ಲಿ ಸೋಮವಾರ ಉಭಯ ದೇಶಗಳ ಸೇನಾ ಕಮಾಂಡರ್‌ಗಳ ಮಟ್ಟದ ಏಳನೇ ಸುತ್ತಿನ ಮಾತುಕತೆ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಮಾತುಕತೆ ರಾತ್ರಿ 8.30 ನಂತರವೂ ಮುಂದುವರಿಯಿತು.

ಗಡಿ ಬಿಕ್ಕಟ್ಟು ಪರಿಸ್ಥಿತಿ ಆರನೇ ತಿಂಗಳಿಗೆ ಮುಂದುವರಿದಿದ್ದು, ಗಡಿ ಭಾಗದಲ್ಲಿ ಭಾರತ ಮತ್ತು ಚೀನಾದ 1 ಲಕ್ಷಕ್ಕೂ ಅಧಿಕ ಯೋಧರು ನಿಯೋಜನೆಗೊಂಡಿದ್ದಾರೆ. ಸಭೆಯ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಘರ್ಷಣೆ ನಡೆದ ಸ್ಥಳದಿಂದ ಯೋಧರು ಹಿಂದಕ್ಕೆ ಸರಿಯುವ ಪ್ರಕ್ರಿಯೆಯ ರೂಪುರೇಷೆ ಅಂತಿಮಗೊಳಿಸವುದೇ ಸಭೆಯ ಮುಖ್ಯ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಲೇಹ್‌ ಮೂಲದ 14ನೇ ಕಾರ್ಪ್ಸ್‌ನ ಕಮಾಂಡರ್‌ ಲೆ.ಜನರಲ್‌ ಹರೀಂದರ್‌ ಸಿಂಗ್‌ ನೇತೃತ್ವದ ಭಾರತದ ನಿಯೋಗದಲ್ಲಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ನವೀನ್‌ ಶ್ರೀವಾಸ್ತವ ಅವರಿದ್ದರು. ಸಭೆಯಲ್ಲಿ ಚೀನಾ ವಿದೇಶಾಂಗ ಸಚಿವಾಲಯದ ಪ್ರತಿನಿಧಿಗಳೂ ಇದ್ದರು ಎಂದು ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌, ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್ ಮತ್ತು ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆ ಮುಖ್ಯಸ್ಥರಿದ್ದ ಚೀನಾ ಅಧ್ಯಯನ ತಂಡವು(ಸಿಎಸ್‌ಜಿ) ಸೇನಾ ಮಾತುಕತೆಗೆ ಭಾರತದ ಕಾರ್ಯತಂತ್ರವನ್ನು ಶುಕ್ರವಾರ ಅಂತಿಮಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.