ಶ್ರೀನಗರ: ಕೇಂದ್ರದ ತಪ್ಪು ನೀತಿಗಳಿಂದಾಗಿ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಆರು ವರ್ಷಗಳಿಂದ ಲಡಾಖ್ ಜನರಿಗೆ ಹಲವು ಭರವಸೆ ನೀಡುತ್ತಾ ಬಂದಿರುವ ಕೇಂದ್ರ ಗೃಹ ಸಚಿವಾಲಯ, ಈವರೆಗೆ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಅವರ ಸಹನೆಯ ಕಟ್ಟೆ ಒಡೆದಿದೆ’ ಎಂದು ಹೇಳಿದ್ದಾರೆ.
‘ತಮ್ಮ ಗುರುತು, ಸಂಸ್ಕೃತಿ, ಭೂಮಿ ಮತ್ತು ಉದ್ಯೋಗವನ್ನು ರಕ್ಷಿಸಿಕೊಳ್ಳಲು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸುವಂತೆ ಅವರು ಒತ್ತಾಯಿಸುತ್ತಿದ್ದಾರೆ. ಆ ಪ್ರಯತ್ನದಲ್ಲಿ ಏನು ಆಗುತ್ತಿಲ್ಲ ಎಂಬುದು ಅವರನ್ನು ನಿರಾಶೆಗೊಳಿಸಿದೆ. ಅವರ ಜನಸಂಖ್ಯೆಯೂ ತೀರಾ ಕಡಿಮೆ ಇದೆ. ಒಂದು ವೇಳೆ ಹೊರಗಿನಿಂದ ಜನರು ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಅವರಿಗೆ ಏನು ಉಳಿಯುತ್ತದೆ?’ ಎಂದು ಪ್ರಶ್ನಿಸಿದ್ದಾರೆ.
‘ಕೇಂದ್ರವು ಇದರ ಬಗ್ಗೆ ಯೋಚಿಸಬೇಕು. ಲಡಾಖ್‌ನಂತಹ ಶಾಂತಿ, ಸಮೃದ್ಧ ಸ್ಥಳವು ಇಂದು ಹೊತ್ತಿ ಉರಿಯುತ್ತಿದೆ. ಜಮ್ಮು ಮತ್ತು ಕಾಶ್ಮೀರ ಹಿಂಸಾಚಾರದಲ್ಲಿ ಮುಳುಗಿದ್ದರೂ ಲಡಾಖ್ ಸದಾ ಶಾಂತಿಯಿಂದ ಇರುತ್ತಿತ್ತು. ಕಾರ್ಗಿಲ್ ಯುದ್ಧದಲ್ಲಿ ಲಡಾಖ್ ಜನರು ಮುಖ್ಯ ಪಾತ್ರ ವಹಿಸಿದ್ದರು’ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಹಿಂಸಾಚಾರಕ್ಕೆ ಕಾಂಗ್ರೆಸ್ ಪ್ರಚೋದನೆ ನೀಡಿದೆ ಎಂಬ ಬಿಜೆಪಿಯ ಹೇಳಿಕೆಯನ್ನು ತಳ್ಳಿಹಾಕಿದ ಮುಫ್ತಿ, ಜನರ ಆಕ್ರೋಶದ ಫಲ ಇದು ಎಂದಿದ್ದಾರೆ.
‘ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅದಕ್ಕಾಗಿ ಬಲಿಪಶುವನ್ನು ಹುಡುಕುತ್ತಿದೆ. ಕಾಂಗ್ರೆಸ್‌ಗೆ ಅಷ್ಟೊಂದು ಬೆಂಬಲವಿದ್ದರೆ, ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ತಮ್ಮ ಗುರುತು, ಭೂಮಿ ಮತ್ತು ಉದ್ಯೋಗವನ್ನು ಕಳೆದುಕೊಳ್ಳುವ ಆತಂಕದಿಂದ ಜನ ಆಕ್ರೋಶಿತರಾಗಿದ್ದಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.