ಸೋನಂ ವಾಂಗ್‌ಚುಕ್
ನವದೆಹಲಿ: ಲಡಾಖ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನನ್ನ ಬಂಧನದಿಂದ ಸರ್ಕಾರಕ್ಕೆ ಸಾಕಷ್ಟು ಸಮಸ್ಯೆಯಾಗಬಹುದು ಎಂದು ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಗುರುವಾರ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿರುವ ಅವರು, ಹಿಂಸಾಚಾರದ ಹೊಣೆಯನ್ನು ನನ್ನ ತಲೆಗೆ ಕಟ್ಟಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ನನ್ನ ಬಂಧನದಿಂದ ಸರ್ಕಾರಕ್ಕೆ ಹೆಚ್ಚು ಸಮಸ್ಯೆಯಾಗಬಹುದು ಎಂದರು.
ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ವಿರುದ್ಧ ಬೊಟ್ಟು ಮಾಡಿರುವ ಕೇಂದ್ರ ಸರ್ಕಾರ, ಅವರು (ಸೋನಮ್ ವಾಂಗ್‌ಚುಕ್) ನೇಪಾಳದಲ್ಲಿ ಇತ್ತೀಚೆಗೆ ನಡೆದ ಜೆನ್–ಝೀ ಪ್ರತಿಭಟನೆಯ ಕುರಿತು ಪ್ರಚೋದನಾಕಾರಿ ಉಲ್ಲೇಖಗಳನ್ನು ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸಿದರು ಎಂದು ಹೇಳಿದೆ.
ಕೇಂದ್ರ ಗೃಹ ಸಚಿವಾಲಯ ತಡರಾತ್ರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಲಡಾಖ್‌ಗೆ ರಾಜ್ಯ ಸ್ಥಾನಮಾನ ಹಾಗೂ ಸಾಂವಿಧಾನಿಕ ರಕ್ಷಣೆಗಾಗಿ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ವಾಂಗ್‌ಚುಕ್ ನೀಡಿದ ಹೇಳಿಕೆಗಳು ಜನಸಮೂಹವನ್ನು ಹಿಂಸಾಚಾರಕ್ಕೆ ಪ್ರಚೋದಿಸಿದವು ಎಂದು ಉಲ್ಲೇಖಿಸಲಾಗಿದೆ.
ಈ ಪರಿಣಾಮ ಬುಧವಾರ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಐವರು ಮೃತಪಟ್ಟು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಹೇಳಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ಮಾತನಾಡಿದ ಸೋನಮ್ ವಾಂಗ್‌ಚುಕ್, ಪಿಎಸ್‌ಎ ( ಜನರ ಸುರಕ್ಷತಾ ಕಾಯ್ದೆ) ಅಡಿಯಲ್ಲಿ ನನ್ನ ಬಂಧಿಸಲು ಸರ್ಕಾರ ಹುನ್ನಾರ ನಡೆಸುತ್ತಿದೆ. ಈ ಬಂಧನಕ್ಕೆ ನಾನು ಸಿದ್ಧ ಎಂದು ಅವರು ಹೇಳಿದರು.
ನನ್ನ ಎರಡು ವರ್ಷ ಜೈಲಿಗೆ ಕಳುಹಿಸಿದರೆ ಜೈಲಿನಲ್ಲಿರುವ ವಾಂಗ್‌ಚುಕ್, ಸ್ವತಂತ್ರವಾಗಿರುವ ವಾಂಗ್‌ಚುಕ್‌ಗಿಂತಲೂ ಅವರಿಗೆ (ಸರ್ಕಾರ) ಹೆಚ್ಚು ತೊಂದರೆ ಕೊಡಬಹುದು ಎಂದು ಅವರು ದೂರವಾಣಿ ಮೂಲಕ ಪಿಟಿಐಗೆ ಹೇಳಿದರು.
ಈ ಹಿಂಸಾಚಾರಕ್ಕೆ ನಾನು ಅಥವಾ ಕಾಂಗ್ರೆಸ್ ಹೊಣೆ ಎಂದು ಸರ್ಕಾರ ಹೇಳಬಹುದು? ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಯಾಕೆಂದರೆ ಯುವಕರು ಈಗಾಗಲೇ ನಿರಾಶರಾಗಿದ್ದಾರೆ. ಸರ್ಕಾರ ಇಲ್ಲಿ ತಂತ್ರ ಬಳಸದೇ ಬುದ್ದಿ ಉಪಯೋಗಿಸಬೇಕು ಎಂದು ವಾಂಗ್‌ಚುಕ್ ಹೇಳಿದರು.
ಸರ್ಕಾತ ತಂತ್ರ, ಕುತಂತ್ರ ಮಾಡಿದರೆ ಶಾಂತಿ ಸ್ಥಾಪನೆಯಾಗದು, ಬದಲಿಗೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ವಾಂಗ್ಚುಕ್ ಎಚ್ಚರಿಸಿದರು.
ಲಡಾಖ್ ಅನ್ನು ಸಂವಿಧಾನದ 6ನೇ ಅನುಚ್ಛೇದದ ವ್ಯಾಪ್ತಿಗೆ ಸೇರಿಸಬೇಕು. ಜೊತೆಗೆ, ರಾಜ್ಯ ಸ್ಥಾನಮಾನ ನೀಡಬೇಕು ಹಾಗೂ ಸ್ಥಳೀಯ ಗಿರಿಜನ ಹಕ್ಕುಗಳು, ಪರಿಸರದ ರಕ್ಷಣೆ, ಯುವಕರಿಗೆ ಉದ್ಯೋಗ, ಮೀಸಲಾತಿಯಂತಹ ಪ್ರಮುಖ ಬೇಡಿಕೆಗಳೀಗೆ ಒತ್ತಾಯಿಸಿ ವಾಂಗ್‌ಚುಕ್ ಸೆಪ್ಟೆಂಬರ್ 10ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ನಿನ್ನೆ ನಡೆದ ಹಿಂಸಾಚಾರದ ಬಳಿಕ ಅವರು ಅಲ್ಲಿಂದ ತೆರಳಿದ್ದಾರೆ ಎಂದು ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.