ADVERTISEMENT

Ladakh Violence; ವಾಂಗ್ಚುಕ್ ಬಂಧನದ ಆದೇಶ ಸರ್ವಾಧಿಕಾರಿ ಧೋರಣೆ: ಸುಪ್ರೀಂಕೋರ್ಟ್

ಪಿಟಿಐ
Published 29 ಅಕ್ಟೋಬರ್ 2025, 15:39 IST
Last Updated 29 ಅಕ್ಟೋಬರ್ 2025, 15:39 IST
<div class="paragraphs"><p>ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್‌</p></div>

ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್‌

   

ಪಿಟಿಐ ಚಿತ್ರ

ನವದೆಹಲಿ: ಲಡಾಖ್‌ಗೆ ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ ಪರಿಸರ ಹೋರಾಟಗಾರ ಸೊನಮ್‌ ವಾಂಗ್ಚೂಕ್ ಅವರ ಬಂಧನವು  ‘ಸಾರ್ವಜನಿಕ ಸುವ್ಯವಸ್ಥೆ ಅಥವಾ ಭದ್ರತೆಯ ಬಗೆಗಿನ ನಿಜವಾದ ಕಾಳಜಿಯಿಂದ ಕೂಡಿರಲಿಲ್ಲ’ ಎಂದು ಸುಪ್ರೀಂಕೋರ್ಟ್‌ ಬುಧವಾರ ಹೇಳಿದೆ.

ADVERTISEMENT

ವಾಂಗ್ಚೂಕ್‌ ಬಿಡುಗಡೆಗೆ ಕೋರಿ, ಪತ್ನಿ ಗೀತಾಂಜಲಿ ಆಂಗ್ಮೊ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್‌ ಮತ್ತು ಎನ್‌.ವಿ. ಅಂಜಾರಿಯ ಅವರಿದ್ದ ಪೀಠವು, ‘ತಿದ್ದುಪಡಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಆಂಗ್ಮೊ ಅವರಿಗೆ ಒಂದು ವಾರ ಕಾಲಾವಕಾಶ ನೀಡಿ, ಮುಂದಿನ ವಿಚಾರಣೆಯನ್ನು ನವೆಂಬರ್‌ 24ಕ್ಕೆ ಮುಂದೂಡಿತು.

‘ವಾಂಗ್ಚೂಕ್ ಬಂಧನವು ಸಾರ್ವಜನಿಕ ಸುವ್ಯವಸ್ಥೆಯನ್ನು ಆಧರಿಸಿರಲಿಲ್ಲ. ಬಂಧನದ ಆದೇಶವು ಅಕ್ರಮ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಆಂಗ್ಮೊ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್‌, ‘ವಾಂಗ್ಚೂಕ್ ಅವರನ್ನು ಯಾವ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಪ್ರಶ್ನಿಸಿ, ಅರ್ಜಿಯನ್ನು ತಿದ್ದುಪಡಿ ಮಾಡಿ ಸಲ್ಲಿಸಲಾಗುವುದು’ ಎಂದು ಪೀಠಕ್ಕೆ ತಿಳಿಸಿದರು.

ವಾಂಗ್ಚೂಕ್ ವಿರುದ್ಧ 2024ರಲ್ಲಿ ದಾಖಲಾಗಿರುವ ಐದು ಎಫ್‌ಐಆರ್‌ಗಳಲ್ಲಿ ಮೂರರಲ್ಲಿ ‘ಅನಾಮಿಕ ವ್ಯಕ್ತಿಗಳು’ ಎಂದಿವೆಯೇ ಹೊರತು  ಅವರ ಹೆಸರನ್ನು ಉಲ್ಲೇಖಿಸಿಲ್ಲ. 2025ರ ಸೆಪ್ಟೆಂಬರ್‌ನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆರೋಪಿಸಿರುವ ಅಂಶಗಳಿಗೂ, 2024ರ ಎಫ್‌ಐಆರ್‌ನಲ್ಲಿರುವ ಅಂಶಗಳಿಗೂ ಯಾವುದೇ ಹತ್ತಿರದ ಅಥವಾ ನೇರ ಸಂಬಂಧವಿಲ್ಲ. ಎಫ್‌ಐಆರ್‌ನಲ್ಲಿ ಗಂಭೀರ ಲೋಪಗಳಿವೆ’ ಎಂದು ಗೀತಾಂಜಲಿ ಆಂಗ್ಮೊ ದೂರಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್‌ 6ರಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರ, ಲಡಾಖ್‌ ಮತ್ತು ಜೋಧ್‌ಪುರ ಕೇಂದ್ರ ಕಾರಾಗೃಹದ ಪೊಲೀಸ್‌ ವರಿಷ್ಠಾಧಿಕಾರಿಗೆ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿಗೊಳಿಸಿದೆ.

‘ಅಪ್ರಸ್ತುತ ವಿಷಯ’
ವಾಂಗ್ಚೂಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ಅನ್ವಯ ಸೆಪ್ಟೆಂಬರ್‌ 26ರಂದು ಬಂಧಿಸಲಾಗಿದೆ. ಸದ್ಯ ಅವರು ರಾಜಸ್ಥಾನದ ಜೋಧ್‌ಪುರ ಜೈಲಿನಲ್ಲಿದ್ದಾರೆ. ವಾಂಗ್ಚೂಕ್ ಬಂಧನದ ಆದೇಶದಲ್ಲಿ ಮತ್ತು ಎಫ್‌ಐಆರ್‌ನಲ್ಲಿ ಹಳೆಯ ಮತ್ತು ಅಪ್ರಸ್ತುತ ವಿಷಯಗಳನ್ನೇ ಸೇರಿಸಲಾಗಿದೆ ಎಂದು ಅವರ ಪತ್ನಿ  ಗೀತಾಂಜಲಿ ಆಂಗ್ಮೊ ಆರೋಪಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.