ADVERTISEMENT

ವಾಂಗ್ಚೂಕ್: ವಿಚಾರಣೆ ಅ.29ಕ್ಕೆ ಮುಂದೂಡಿಕೆ

ಲಡಾಖ್‌ಗೆ ರಾಜ್ಯದ ಸ್ಥಾನಮಾನಕ್ಕಾಗಿ ಆಗ್ರಹಿಸಿ ಹೋರಾಟ

ಪಿಟಿಐ
Published 15 ಅಕ್ಟೋಬರ್ 2025, 14:21 IST
Last Updated 15 ಅಕ್ಟೋಬರ್ 2025, 14:21 IST
ಸೊನಮ್‌ ವಾಂಗ್ಚೂಕ್
ಸೊನಮ್‌ ವಾಂಗ್ಚೂಕ್   

ನವದೆಹಲಿ: ಲಡಾಖ್‌ಗೆ ರಾಜ್ಯದ ಸ್ಥಾನಮಾನಕ್ಕಾಗಿ ಆಗ್ರಹಿಸಿ, ಹೋರಾಟ ನಡೆಸಿ ಬಂಧನದಲ್ಲಿರುವ ಪರಿಸರ ಹೋರಾಟಗಾರ ಸೊನಮ್‌ ವಾಂಗ್ಚೂಕ್ ಅವರ ಬಿಡುಗಡೆಗೆ ಕೋರಿ, ಅವರ ಪತ್ನಿ ಗೀತಾಂಜಲಿ ಆಂಗ್ಮೊ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಅ.29ಕ್ಕೆ ಮುಂದೂಡಿದೆ. 

ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ಅನ್ವಯ ಸೆಪ್ಟೆಂಬರ್‌ 26ರಂದು ವಾಂಗ್ಚೂಕ್ ಅವರನ್ನು ಬಂಧಿಸಲಾಗಿತ್ತು. ಸದ್ಯ ಅವರು ರಾಜಸ್ಥಾನದ ಜೋಧಪುರ ಜೈಲಿನಲ್ಲಿದ್ದಾರೆ. 

ವಾಂಗ್ಚೂಕ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ತಿದ್ದುಪಡಿ ಮಾಡಲು ಬಯಸುವುದಾಗಿ ಗೀತಾಂಜಲಿ ಆಂಗ್ಮೊ ಕೋರ್ಟ್‌ಗೆ ಮನವಿ ಮಾಡಿದ್ದಾರೆ. 

ADVERTISEMENT

ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್‌ ಮತ್ತು ಎನ್‌.ವಿ ಅಂಜರಿಯಾ ಅವರನ್ನೊಳಗೊಂಡ ಪೀಠವು ಬುಧವಾರ,  ‘ವಾಂಗ್ಚೂಕ್ ಅವರ ಸಹೋದರ ಮತ್ತು ವಕೀಲ  ಜೈಲಿನಲ್ಲಿ ವಾಂಗ್ಚೂಕ್ ಅವರನ್ನು ಭೇಟಿಯಾಗಿದ್ದಾರೆ’ ಎಂದು ರಾಜಸ್ಥಾನದ ಜೋಧಪುರ ಜೈಲಿನ ಜೈಲರ್‌ ಸಲ್ಲಿಸಿರುವ ಅಫಿಡವಿಟ್‌ ಪರಿಶೀಲಿಸಿತು.  

‘ವಾಂಗ್ಚೂಕ್ ಅವರನ್ನು ಯಾವ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಪ್ರಶ್ನಿಸಿ, ಅರ್ಜಿಯನ್ನು ತಿದ್ದುಪಡಿ ಮಾಡಿ ಸಲ್ಲಿಸಲಾಗುವುದು’ ಎಂದು ಗೀತಾಂಜಲಿ ಆಂಗ್ಮೊ ಪರವಾಗಿ ಹಾಜರಾದ ವಕೀಲ ಕಪಿಲ್‌ ಸಿಬಲ್‌ ಪೀಠದ ಗಮನಕ್ಕೆ ತಂದರು.

‘ಪತ್ನಿಯ ಜತೆಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ವಾಂಗ್ಚೂಕ್ ಅವರಿಗೆ ಅವಕಾಶ ನೀಡಬೇಕು’ ಎಂದು ಸಿಬಲ್‌ ಮನವಿ ಮಾಡಿದರು.  ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದಕ್ಕೆ ಯಾವುದೇ ಆಕ್ಷೇಪ ಇಲ್ಲ ಎಂದು ಪೀಠದ ಗಮನಕ್ಕೆ ತಂದರು.