ನವದೆಹಲಿ: ಲಖಿಂಪುರ ಖೇರಿಯಲ್ಲಿ ಪ್ರತಿಭಟನಕಾರರ ಮೇಲೆ ವಾಹನ ಹತ್ತಿಸಿ ಎಂಟು ಜನರನ್ನು ಕೊಂದ ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಆರೋಪ ಕುರಿತಂತೆ ಕೇಂದ್ರದ ಮಾಜಿ ಸಚಿವ ಅಜಯ್ ಮಿಶ್ರಾ ತೆನಿ ಅವರ ಪುತ್ರ ಆಶೀಶ್ ಮಿಶ್ರಾ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ಪೀಠವು, ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸುವಂತೆ ಆದೇಶಿಸಿದೆ.
ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.
‘ಆರೋಪಿಗಳು ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ’ ಎಂದು ಸಂತ್ರಸ್ತರ ಕುಟುಂಬ ಸದಸ್ಯರ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದರು. ವಕೀಲ ಸಿದ್ಧಾರ್ಥ ಡೇವ್ ಸಹ ಸಂತ್ರಸ್ತರ ಕುಟುಂಬದವರ ಪರ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.