ADVERTISEMENT

ಲಖಿಂಪುರ ಘಟನೆ ಭಯೋತ್ಪಾದನಾ ದಾಳಿ: ಸಂಯುಕ್ತ ಕಿಸಾನ್ ಮೋರ್ಚಾ

ಅಕ್ಟೋಬರ್ 11ರಿಂದ 26ರವರೆಗೆ ಸರಣಿ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 14:07 IST
Last Updated 9 ಅಕ್ಟೋಬರ್ 2021, 14:07 IST
ದೆಹಲಿಯಲ್ಲಿ ಶನಿವಾರ ಯುವ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು
ದೆಹಲಿಯಲ್ಲಿ ಶನಿವಾರ ಯುವ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು   

ನವದೆಹಲಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರನನ್ನು ಬಂಧಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಶನಿವಾರ ಆಗ್ರಹಿಸಿದೆ. ಲಖಿಂಪುರ–ಖೇರಿ ಘಟನೆಯು ‘ಪೂರ್ವನಿಯೋಜಿತ ಕೃತ್ಯ’ ಹಾಗೂ ‘ಭಯೋತ್ಪಾದನಾ ದಾಳಿ’ ಎಂದು ಆರೋಪಿಸಿದೆ.

ತಮ್ಮ ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 11ರೊಳಗೆ ಲಖಿಂಪುರ ಖೇರಿಯಿಂದ ‘ಶಹೀದ್ ಕಿಸಾನ್ ಯಾತ್ರೆ’ ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ. ಅಂದು ಮೃತ ರೈತರ ಅಸ್ತಿಯೊಂದಿಗೆ ಮೆರವಣೆಗೆ ನಡೆಸಲು ನಿರ್ಧರಿಸಿದೆ.

ಅಕ್ಟೋಬರ್ 12ರಂದು ಪ್ರಾರ್ಥನಾ ಸಭೆ ನಡೆಸುವಂತೆ ರೈತ ಸಂಘಟನೆಗಳಿಗೆ ಕರೆ ನೀಡಿದ್ದು, ಅಂದು ಸಂಜೆ ಮನೆಯ ಹೊರಗಡೆ ಮೇಣದಬತ್ತಿ ಹಚ್ಚುವಂತೆ ಕೋರಿದೆ. ಲಖಿಂಪುರ ಖೇರಿಯ ಟಿಕೋನಾದಲ್ಲಿ ಮುಖ್ಯ ಪ್ರಾರ್ಥನಾ ಸಭೆ ಜರುಗಲಿದೆ. ಘಟನೆಯಲ್ಲಿ ಮೃತರಾದ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತರಿಗೆ ನಮನ ಸಲ್ಲಿಸಲಾಗುತ್ತದೆ.

ADVERTISEMENT

ಹಿಂಸಾಚಾರ ಖಂಡಿಸಿ ಅಕ್ಟೋಬರ್ 15ರಂದು ದಸರಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರ ಪ್ರತಿಕೃತಿಯದನ್ನು ದಹಿಸಲಾಗುವುದು ಎಂದು ಸಂಘಟನೆ ತಿಳಿಸಿದೆ.

ಅಕ್ಟೋಬರ್ 18ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ದೇಶದಾದ್ಯಂತ ‘ರೈಲು ತಡೆ’ ನಡೆಸಲು ಕರೆ ಕೊಟ್ಟಿದೆ. ಹಾಗೆಯೇ ಅಕ್ಟೋಬರ್ 26ರಂದು ಲಖನೌನಲ್ಲಿ ಮಹಾಪಂಚಾಯತ್‌ ನಡೆಸಲಾಗುತ್ತಿದೆ.

ತಪ್ಪಿತಸ್ಥರನ್ನು ರಕ್ಷಿಸುತ್ತಿರುವ ಹಾಗೂ ಸಂಚು ರೂಪಿಸಿರುವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಯೋಗೇಂದ್ರ ಯಾದವ್ ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

‘ಪ್ರತಿಭಟನೆ ನಡೆಸುವ ರೈತರ ವಿರುದ್ಧ ಸರ್ಕಾರವು ಹಿಂಸೆಯ ವಿಧಾನವನ್ನು ಅಳವಡಿಸಿಕೊಂಡಿದೆ. ಆದರೆ ನಾವು ಹಿಂಸೆಯ ಹಾದಿಯನ್ನು ಹಿಡಿಯುವುದಿಲ್ಲ’ ಎಂದು ರೈತ ಮುಖಂಡ ಪ್ರತಿಪಾದಿಸಿದ್ದಾರೆ.

‘ಈ ಘಟನೆಯು ಇದ್ದಕ್ಕಿದ್ದಂತೆ ಜರುಗಿದ್ದಲ್ಲ. ಸೆಪ್ಟೆಂಬರ್ 25ರಂದು ಲಖಿಂಪುರ ಖೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಕೆಲವು ಟೀಕೆಗಳನ್ನು ಮಾಡಿದರು. ಇದು ಅಕ್ಟೋಬರ್ 3ರಂದು ಏನಾಯಿತು ಎಂಬುದರ ಹಿನ್ನೆಲೆಯನ್ನು ವಿವರಿಸುತ್ತದೆ. ಈ ವಿಡಿಯೊ ಫೇಸ್‌ಬುಕ್‌ನಲ್ಲಿದೆ. ಈ ಘಟನೆಯು ಭಯೋತ್ಪಾದಕ ದಾಳಿ ಮತ್ತು ಪೂರ್ವ ನಿಯೋಜಿತ ಪಿತೂರಿಯ ಭಾಗವಾಗಿದೆ’ ಎಂದುರೈತ ನಾಯಕ ದರ್ಶನ್ ಪಾಲ್ ಆರೋಪಿಸಿದರು.

ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಅವರು ಕಾರಿನಲ್ಲಿದ್ದರು ಎಂದು ರೈತ ಸಂಘಟನೆ ಆರೋಪಿಸಿದೆ. ಆದರೆ ಸಚಿವರು ಇದನ್ನು ನಿರಾಕರಿಸಿದ್ದಾರೆ. ಅವರು ಬೇರೊಂದು ಕಾರ್ಯಕ್ರಮದಲ್ಲಿದ್ದರು ಎಂದು ತಿಳಿಸುವ ಸೂಕ್ತ ಪುರಾವೆಗಳನ್ನು ಒದಗಿಸುವುದಾಗಿ ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.