ADVERTISEMENT

ಲಖಿಂಪುರ–ಖೇರಿ ಪ್ರಕರಣ: ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನಿಗಾ

ಸುಪ್ರೀಂ ಕೋರ್ಟ್‌ ಸಲಹೆಯನ್ನು ಒಪ್ಪಿದ ಉತ್ತರ ಪ್ರದೇಶ ಸರ್ಕಾರ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 18:10 IST
Last Updated 15 ನವೆಂಬರ್ 2021, 18:10 IST
ಲಖಿಂಪುರ ಖೇರಿ ಹಿಂಸಾಚಾರ
ಲಖಿಂಪುರ ಖೇರಿ ಹಿಂಸಾಚಾರ   

ನವದೆಹಲಿ: ಲಖಿಂಪುರ–ಖೇರಿ ಹಿಂಸಾಚಾರ ಪ್ರಕರಣದ ತನಿಖೆಯ ಉಸ್ತುವಾರಿಗೆ ನಿವೃತ್ತ ನ್ಯಾಯಮೂರ್ತಿ
ಯನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ಸಲಹೆಗೆ ಉತ್ತರ ಪ್ರದೇಶ ಸರ್ಕಾರ ಸೋಮವಾರ ಸಮ್ಮತಿ ಸೂಚಿಸಿದೆ. ನಾಲ್ವರು ರೈತರು ಮತ್ತು ಒಬ್ಬ ಪತ್ರಕರ್ತನ ಮೇಲೆ ಎಸ್‌ಯುವಿ ಹರಿಸಿ ಹತ್ಯೆ ಹಾಗೂ ನಂತರದ ಹಿಂಸಾಚಾರದಲ್ಲಿ ಮೂವರ ಹತ್ಯೆಯು ಅಕ್ಟೋಬರ್‌ 3ರಂದು ಲಖಿಂಪುರ–ಖೇರಿಯಲ್ಲಿ ನಡೆದಿತ್ತು.

ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ತನಿಖೆಯ ದಿನ ನಿತ್ಯದ ಪ್ರಗತಿಯ ಉಸ್ತುವಾರಿಗೆ ನೇಮಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ
ಅವರ ನೇತೃತ್ವದ ಪೀಠವು ಹೇಳಿದೆ.

ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ ಮೇಲೆ ನಿಗಾ ಇರಿಸಲು ನಿವೃತ್ತ ನ್ಯಾಯಮೂರ್ತಿಯನ್ನು ಸುಪ್ರೀಂ ಕೋರ್ಟ್‌ ನೇಮಿಸಬಹುದು ಎಂದು ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಹೇಳಿದರು. ರಾಜ್ಯದ ಹೊರಗಿನವರಾಗಿರಲಿ ರಾಜ್ಯದವರಾಗಿರಲಿ ನ್ಯಾಯಮೂರ್ತಿ ಎಂದರೆ ನ್ಯಾಯಮೂರ್ತಿಯೇ. ಹಾಗಾಗಿ, ರಾಜ್ಯದ ಹೊರಗಿನವರನ್ನೇ ನೇಮಿಸಬೇಕೆಂದಿಲ್ಲ ಎಂದೂ ಅವರು ಹೇಳಿದರು. ಈ ಹೊಣೆಯನ್ನು ವಹಿಸಿಕೊಳ್ಳಲು ಸಿದ್ಧವಿರುವ ನ್ಯಾಯಮೂರ್ತಿಯನ್ನು ಗುರುತಿಸಲಾಗುವುದು ಎಂದು ಪೀಠವು ಹೇಳಿತು.

ADVERTISEMENT

‘ಈಗ, ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇಮಕ ನಿರ್ಧಾರ ಕೈಗೊಳ್ಳಲು ಬೇಕಾದ ಸ್ವಾತಂತ್ರ್ಯ ಇದೆ. ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಕೇಶ್‌ ಕುಮಾರ್‌ ಜೈನ್‌ ಅವರನ್ನು ನೇಮಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಅವರ ಜತೆಗೆ ಈ ಬಗ್ಗೆ ಸಮಾಲೋಚನೆ ನಡೆಸಬೇಕಿದೆ’ ಎಂದು ಪೀಠವು ತಿಳಿಸಿತು.

ಪರಿಹಾರ ಪಡೆದುಕೊಂಡಿಲ್ಲದ, ಸಂತ್ರಸ್ತ ಕುಟುಂಬಗಳ ದೂರುಗಳೇನು ಎಂಬ ಬಗ್ಗೆಯೂ ಗಮನ ಹರಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತು.

ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಇದೇ 8ರಂದು ತರಾಟೆಗೆ ತೆಗೆದುಕೊಂಡಿತ್ತು. ಪಂಜಾಬ್‌–ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯನ್ನು ತನಿಖೆಯ ಪ್ರಗತಿಯ ಮೇಲೆ ನಿಗಾ ಇರಿಸಲು ನೇಮಿ ಸುವ ಪ್ರಸ್ತಾವವನ್ನೂ ಮುಂದಿಟ್ಟಿತ್ತು. ಪ್ರಕರಣದ ಪ್ರಮುಖ ಆರೋಪಿಯೊಬ್ಬರನ್ನು ರಕ್ಷಿಸುವುದಕ್ಕಾಗಿಯೇ ಸಾಕ್ಷ್ಯ ಸಂಗ್ರಹ ಮಾಡಿದಂತಿದೆ ಎಂದು ಅತೃಪ್ತಿ ವ್ಯಕ್ತಪಡಿಸಿತ್ತು. ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ, ಪ್ರಮುಖ ಆರೋಪಿ ಆಶಿಶ್‌ ಮಿಶ್ರಾ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೀಗೆ ಹೇಳಲಾಗಿತ್ತು.

‘ಎಸ್‌ಐಟಿ ಮೇಲ್ದರ್ಜೆಗೆ ಏರಿಸಿ’

ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಮೇಲ್ದರ್ಜೆಗೆ ಏರಿಸುವಂತೆ ಉತ್ತರ ‍ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯವು ಸೂಚಿಸಿದೆ. ಉನ್ನತ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲು ಹೇಳಿದೆ. ಉತ್ತರ ಪ್ರದೇಶ ಕೇಡರ್‌ನ ಐಪಿಎಸ್‌ ಅಧಿಕಾರಿಗಳನ್ನು ನೇಮಿಸಬೇಕು. ಆದರೆ, ಅವರು ಮೂಲತಃ ಬೇರೆ ರಾಜ್ಯದವರಾಗಿರಬೇಕು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.