ಸುಪ್ರೀಂ ಕೋರ್ಟ್
ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ (2021) ಪ್ರಕರಣದ ಸಾಕ್ಷಿದಾರರೊಬ್ಬರಿಗೆ ಬೆದರಿಕೆ ಬಂದಿದ್ದ ಆರೋಪದ ಕುರಿತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ಪೊಲೀಸರಿಗೆ ಸೂಚಿಸಿದೆ.
ಕೇಂದ್ರದ ಮಾಜಿ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ವಿರುದ್ಧ ಸಾಕ್ಷಿ ನುಡಿದಿದ್ದಕ್ಕಾಗಿ ಬೆದರಿಕೆ ಬಂದಿದೆ ಎಂದು ಸಾಕ್ಷಿದಾರರೊಬ್ಬರು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು. ಆಗ ಕೋರ್ಟ್, ಈ ಸಂಬಂಧ ಪೊಲೀಸರ ಬಳಿ ದೂರು ನೀಡುವಂತೆ ಅವರಿಗೆ ಹೇಳಿತು.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೇಶ್ವರ ಸಿಂಗ್ ಅವರನ್ನೊಳಗೊಂಡ ಪೀಠ ಈ ಕುರಿತು ವಿಚಾರಣೆ ನಡೆಸಿತು. ಸಾಕ್ಷಿದಾರರ ದೂರನ್ನು ಪರಿಶೀಲಿಸಿ, ಅಗತ್ಯವಿದ್ದರೆ ಹೊಸ ವರದಿ ಸಲ್ಲಿಸುವಂತೆ ಪೀಠವು ಪೊಲೀಸರಿಗೆ ತಿಳಿಸಿತು.
ಮಿಶ್ರಾ ಅವರಿಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಇದೇ ವೇಳೆ ನಿರಾಕರಿಸಿತು. ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಅವರ ಜಾಮೀನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಈ ಕುರಿತ ವಿಚಾರಣೆಯನ್ನು ಪೀಠ ಏಪ್ರಿಲ್ 16ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.