ADVERTISEMENT

ಲಖಿಂಪುರ–ಖೇರಿ ಹಿಂಸಾಚಾರ: ಪೊಲೀಸರಿಗೆ ಸಿಗದ ಕೇಂದ್ರ ಸಚಿವರ ಮಗ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 19:01 IST
Last Updated 7 ಅಕ್ಟೋಬರ್ 2021, 19:01 IST
ಲಖಿಂಪುರ–ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರೊಬ್ಬರ ಕುಟುಂಬದ ಸದಸ್ಯರನ್ನು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಗುರುವಾರ ಭೇಟಿಯಾದರು –ಪಿಟಿಐ ಚಿತ್ರ
ಲಖಿಂಪುರ–ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರೊಬ್ಬರ ಕುಟುಂಬದ ಸದಸ್ಯರನ್ನು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಗುರುವಾರ ಭೇಟಿಯಾದರು –ಪಿಟಿಐ ಚಿತ್ರ   

ಲಖನೌ: ಲಖಿಂಪುರ–ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿದ ಪ್ರಕರಣದಲ್ಲಿ, ಆಶಿಶ್‌ ಪಾಂಡೆ ಮತ್ತು ಲವಕುಶ ಎಂಬ ಇಬ್ಬರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ.

ಪ್ರಮುಖ ಆರೋಪಿಯಾಗಿರುವ, ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ತಮ್ಮ ‘ಕೈಗೆ ಸಿಗುತ್ತಿಲ್ಲ’ ಎಂದಿರುವ ಉತ್ತರ ಪ್ರದೇಶ ಪೊಲೀಸರು, ಆತನಿಗೆ ಸಮನ್ಸ್‌ ಜಾರಿ ಮಾಡಿದ್ದಾಗಿ ತಿಳಿಸಿದ್ದಾರೆ. ಆತ ಎಲ್ಲಿದ್ದಾನೆಂಬ ಮಾಹಿತಿಯೂ ಸಿಕ್ಕಿಲ್ಲ ಎಂದು ಲಖಿಂಪುರ– ಖೇರಿಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿರುವ ಆಶಿಶ್‌ ಮಿಶ್ರಾ, ಈ ಸಂಬಂಧ ಮಂಗಳವಾರದವರೆಗೂ ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ.

ADVERTISEMENT

ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪ್ರತಿಭಟನನಿರತರ ಮೇಲೆ ವಾಹನ ಹರಿಸಿರುವ ದೃಶ್ಯಗಳಿದ್ದ ಎರಡು ವಿಡಿಯೊಗಳು ಲಭ್ಯವಾಗಿವೆ. ಹಾಗಿದ್ದರೂ ಆಶಿಶ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.

ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಎಷ್ಟು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ. ಹೀಗಾಗಿ, ಇದೀಗ ಪ್ರಮುಖ ಆರೋಪಿ ಆಶಿಶ್‌ನನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಸರ್ಕಾರ ಹೇಳಿದೆ. ಸ್ಥಳೀಯ ಮಾಧ್ಯಮವೊಂದರಲ್ಲಿ ಹೇಳಿಕೆ ನೀಡಿರುವ ಮೂಲಗಳ ಪ್ರಕಾರ, ಆಶಿಶ್‌ ಸದ್ಯದಲ್ಲಿಯೇ ಶರಣಾಗಲಿದ್ದಾರೆ ಎನ್ನಲಾಗಿದೆ.

ಆಶಿಶ್‌ನನ್ನು ಬಂಧಿಸದೇ ಇರುವುದ‌ಕ್ಕಾಗಿ ರಾಜ್ಯ ಸರ್ಕಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು.

‘ಪ್ರಕರಣದಲ್ಲಿ, ಆರೋಪಿಯ ಪಾತ್ರ ಇರುವುದನ್ನು ಪುಷ್ಟೀಕರಿಸುವ ವಿಡಿಯೊಗಳು ಕಣ್ಮುಂದೆ ಇದ್ದಾಗಲೂ ಸರ್ಕಾರ ಕಾರ್ಯಪ್ರವೃತ್ತವಾಗುತ್ತಿಲ್ಲ. ಇಷ್ಟೊಂದು ಸ್ಪಷ್ಟವಾಗಿರುವ ವಿಷಯ ದುರಹಂಕಾರದ ಬಿಜೆಪಿ ಸರ್ಕಾರದ ಕಣ್ಣಿಗೆ ಕಾಣುವುದಿಲ್ಲ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಟೀಕಿಸಿದ್ದಾರೆ.

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿನ ಸಂತ್ರಸ್ತ ಕುಟುಂಬದವರನ್ನು ಗುರುವಾರ ಭೇಟಿ ಮಾಡಿದ ಅಖಿಲೇಶ್‌, ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

ಅ. 3ರಂದು ನಡೆದ ಈ ಹಿಂಸಾಚಾರದಲ್ಲಿ ನಾಲ್ವರು ರೈತರು, ಒಬ್ಬ ಪ‍ತ್ರಕರ್ತ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. ಹಲವಾರು ಜನರು ಗಾಯಗೊಂಡಿದ್ದರು.

ತನಿಖಾ ಆಯೋಗ ರಚನೆ

ಲಖಿಂಪುರ ಖೇರಿ ಜಿಲ್ಲೆಯಲ್ಲಿ ಅ.3ರಂದು ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ, ಉತ್ತರ ಪ್ರದೇಶ ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿದೆ.

ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರದೀಪ್‌ ಕುಮಾರ್‌ ಶ್ರೀವಾತ್ಸವ್‌ ಅವರು ಆಯೋಗದ ನೇತೃತ್ವ ವಹಿಸಿದ್ದು, ಎರಡು ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ, ವರದಿ ಸಲ್ಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.