ADVERTISEMENT

ಲಖಿಂಪುರ–ಖೇರಿಗೆ ಹೋಗುವ ದಾರಿಯಲ್ಲಿ ಸಿಧುರನ್ನು ವಶಕ್ಕೆ ಪಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 19:10 IST
Last Updated 7 ಅಕ್ಟೋಬರ್ 2021, 19:10 IST
ನವಜೋತ್‌ ಸಿಂಗ್ ಸಿಧು
ನವಜೋತ್‌ ಸಿಂಗ್ ಸಿಧು   

ಚಂಡೀಗಡ: ನವಜೋತ್‌ ಸಿಂಗ್ ಸಿಧು ಸೇರಿ ಪಂಜಾಬ್‌ ಕಾಂಗ್ರೆಸ್‌ನ ಹಲವು ಮುಖಂಡರನ್ನು ಲಖಿಂಪುರ–ಖೇರಿಗೆ ಹೋಗುವ ದಾರಿಯಲ್ಲಿ ಸಹರಣಪುರದಲ್ಲಿ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಪಂಜಾಬ್‌ನ ಕೆಲವು ಸಚಿವರು, ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರು ಮೊಹಾಲಿಯಲ್ಲಿ ಗುರುವಾರ ಜಮಾಯಿಸಿದರು. ನಂತರ ಅವರು ಸಿಧು ನೇತೃತ್ವದಲ್ಲಿ ಲಖಿಂಪುರ–ಖೇರಿಯತ್ತ ಸಾಗಿದರು. ಆದರೆ, ಹರಿಯಾಣ–ಉತ್ತರ ಪ್ರದೇಶ ಗಡಿಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಪೊಲೀಸರು ಮತ್ತು ಕಾಂಗ್ರೆಸ್‌ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ಲಖಿಂಪುರ–ಖೇರಿಗೆ ಐವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇದೆ ಎಂದು ಪೊಲೀಸರು ವಾದಿಸಿದರು. ಆದರೆ, ಸಚಿವರು ಮತ್ತು ಶಾಸಕರಿಗೆ ಅವಕಾಶ ಕೊಡಲೇಬೇಕು ಎಂದು ಸಿಧು ಪಟ್ಟು ಹಿಡಿದರು. ಪೊಲೀಸರು ಒಪ್ಪಲಿಲ್ಲ. ಸಿಧು ಮತ್ತು ಇತರ ಮುಖಂಡರನ್ನು ಪೊಲೀಶರು ವಶಕ್ಕೆ ಪಡೆದರು.

ADVERTISEMENT

ಬಿಜೆಪಿ ಮುಖಂಡರ ಕಾರು ರೈತನಿಗೆ ಡಿಕ್ಕಿ

ಅಂಬಾಲಾ: ಬಿಜೆಪಿ ಮುಖಂಡರು ಸಂಚರಿಸುತ್ತಿದ್ದ ಕಾರು ಅಂಬಾಲಾ ಸಮೀಪ ನಾರಾಯಣಗಡ ಎಂಬಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಡಿಕ್ಕಿ ಹೊಡೆದಿದೆ. ಬಿಜೆಪಿ ಸಂಸದನಾಯಬ್‌ ಸಿಂಗ್‌ ಸೈನಿ ಮತ್ತು ಹರಿಯಾಣದ ಕ್ರೀಡಾ ಸಚಿವ ಸಂದೀಪ್‌ ಸಿಂಗ್‌ ಅವರು ಕಾರಿನಲ್ಲಿ ಸಂಚರಿಸುತ್ತಿದ್ದರು.

ಬಿಜೆಪಿ ಮುಖಂಡರ ಕಾರು ಭವನ್‌ ಪ್ರೀತ್ ಎಂಬ ರೈತನಿಗೆ ಡಿಕ್ಕಿ ಹೊಡೆದಿದೆ. ಅವರ ಕಾಲಿಗೆ ಗಾಯ ಆಗಿದೆ ಎಂದು ಪ್ರತಿಭಟನೆನಿತರ ರೈತರು ಹೇಳಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.