ADVERTISEMENT

ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಲಲಿತ್ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2023, 11:01 IST
Last Updated 30 ಮಾರ್ಚ್ 2023, 11:01 IST
   

ನವದೆಹಲಿ: ಮೋದಿ ಉಪನಾಮ ಕುರಿತಂತೆ ವ್ಯಂಗ್ಯ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬ್ರಿಟನ್ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಭಾರತದಿಂದ ಪರಾರಿಯಾಗಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.

ಮೋದಿ ಉಪನಾಮ ವ್ಯಂಗ್ಯ ಮಾಡಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಕೆಲ ದಿನಗಳ ಬಳಿಕ ಲಲಿತ್ ಮೋದಿ ಈ ಹೇಳಿಕೆ ಕೊಟ್ಟಿದ್ದಾರೆ.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ, 'ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ' ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಮೂಲಕ ರಾಹುಲ್‌ ಅವರು 'ಮೋದಿ' ಉಪನಾಮ ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ADVERTISEMENT

ಈ ಹೇಳಿಕೆಯಲ್ಲಿ ರಾಹುಲ್ ಗಾಂಧಿ ಲಲಿತ್ ಮೋದಿ ಹೆಸರನ್ನೂ ಪ್ರಸ್ತಾಪಿಸಿದ್ದರು.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಲಲಿತ್ ಮೋದಿ, ರಾಹುಲ್ ಗಾಂಧಿ ಮತ್ತು ಸಹಚರರು ಪದೇ ಪದೇ ನನ್ನನ್ನು ಕಾನೂನಿನಿಂದ ತಪ್ಪಿಸಿಕೊಂಡು ಹೋಗಿರುವ ದೇಶಭ್ರಷ್ಟ ಎಂದು ಹೇಳುತ್ತಿರುವುದು ಹೇಗೆ? ಏಕೆ? ನನ್ನ ವಿರುದ್ಧದ ಆರೋಪಗಳು ಸಾಬೀತಾಗಿವೆಯೇ' ಎಂದು ಅವರು ಪ್ರಶ್ನಿಸಿದ್ದಾರೆ.

‘ರಾಹುಲ್ ಗಾಂಧಿಯವರನ್ನು ಬ್ರಿಟನ್ ನ್ಯಾಯಾಲಯಕ್ಕೆ ಎಳೆಯಲು ನಾನು ತಕ್ಷಣ ನಿರ್ಧರಿಸಿದ್ದೇನೆ. ‌ಆಗ ಪಕ್ಕಾ ಪುರಾವೆಗಳೊಂದಿಗೆ ನ್ಯಾಯಾಲಯಕ್ಕೆ ಬರಬೇಕಾಗುತ್ತದೆ. ರಾಹುಲ್ ತನ್ನನ್ನು ತಾನು ಸಂಪೂರ್ಣ ಮೂರ್ಖನನ್ನಾಗಿಸಿಕೊಳ್ಳುವುದನ್ನು ಎದುರುನೋಡುತ್ತಿದ್ದೇನೆ’ಎಂದಿದ್ದಾರೆ.

ಟ್ವೀಟ್‌ಗಳನ್ನು ಕಾಂಗ್ರೆಸ್‌ನ ಹಲವು ನಾಯಕರಿಗೆ ಟ್ಯಾಗ್ ಮಾಡಿರುವ ಅವರು, ಇವರೆಲ್ಲರೂ ವಿದೇಶಗಳಲ್ಲಿ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಅವುಗಳ ವಿಳಾಸ ಮತ್ತು ಚಿತ್ರಗಳನ್ನು ನಾನು ಕಳುಹಿಸುತ್ತೇನೆ. ನಿಜವಾದ ಕಳ್ಳರು ದೇಶದ ಜನರನ್ನು ಮೂರ್ಖರನ್ನಾಗಿಸುವುದು ಬೇಡ’ ಎಂದು ಅವರು ಹೇಳಿದ್ದಾರೆ.

'ನನ್ನ ವಿರುದ್ಧ ಒಂದು ಪೈಸೆಯಷ್ಟೂ ವಂಚನೆಯ ಆರೋಪ ಸಾಬೀತಾಗಿಲ್ಲ. ಬದಲಿಗೆ ಸುಮಾರು 100 ಬಿಲಿಯನ್ ಡಾಲರ್ ಆದಾಯ ತಂದುಕೊಟ್ಟಿರುವ ಅತ್ಯದ್ಬುತ ಕ್ರೀಡಾಕೂಟವನ್ನು ಆರಂಭಿಸಿದ್ದೇನೆ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.