ADVERTISEMENT

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಕುಟುಂಬ ಸದಸ್ಯರು ಸೇರಿದಂತೆ ಹಲವೆಡೆ ಇ.ಡಿ ದಾಳಿ

ಪಿಟಿಐ
Published 10 ಮಾರ್ಚ್ 2023, 11:03 IST
Last Updated 10 ಮಾರ್ಚ್ 2023, 11:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ/ಪಟ್ನಾ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಮೂವರು ಪುತ್ರಿಯರು ಹಾಗೂ ಆರ್‌ಜೆಡಿ ನಾಯಕರ ಸ್ಥಳಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಹಾರದ ಪಟ್ನಾ, ದೆಹಲಿ, ರಾಂಚಿ, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಇ.ಡಿ ಶೋಧ ಕಾರ್ಯ ನಡೆಸಿದೆ.

ಲಾಲು ಪ್ರಸಾದ್ ಪುತ್ರಿಯರಾದ ರಾಗಿಣಿ ಯಾದವ್, ಚಂದಾ ಯಾದವ್ ಮತ್ತು ಹೇಮಾ ಯಾದವ್ ಮತ್ತು ಆರ್‌ಜೆಡಿಯ ಮಾಜಿ ಶಾಸಕ ಅಬು ದೋಜಾನ ಅವರಿಗೆ ಸೇರಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಕಳೆದ ವಾರವಷ್ಟೇ ಲಾಲು ಮತ್ತು ಅವರ ಪತ್ನಿ, ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಿತ್ತು.

ಲಾಲು ಮತ್ತು ರಾಬ್ಡಿ ಸೇರಿದಂತೆ ಇತರೆ 14 ಮಂದಿ ವಿರುದ್ಧ ಸಿಬಿಐ ಆರೋಪಟ್ಟಿ ಸಲ್ಲಿಸಿದೆ. ಅಲ್ಲದೆ ಮಾರ್ಚ್ 15ಕ್ಕೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ನೀಡಿದೆ.

‘ಬೇರೆಯವರು ಬರೆದುಕೊಟ್ಟ ಚಿತ್ರಕಥೆ ಆಧರಿಸಿ ವಿರೋಧ ಪಕ್ಷದ ನಾಯಕರ ಮೇಲೆ ಸಿಬಿಐ ಹಾಗೂ ಇ.ಡಿ ಶೋಧ ಕಾರ್ಯ ನಡೆಸುತ್ತದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಹಾರದಲ್ಲಿ ಆಡಳಿತ ಪಕ್ಷ ಬದಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ನಮ್ಮ ಪಕ್ಷದ ನಾಯಕರ ಮೇಲೆ ‘ದಾಳಿ’ ನಡೆಯುತ್ತಿದೆ’ ಎಂದು ಆರ್‌ಜೆಡಿ ನಾಯಕ ಮನೋಜ್‌ ಝಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.