ADVERTISEMENT

ಹಿಂದಿಯನ್ನು ನೀವು ಹೇರದಿದ್ದರೆ ನಾವು ಅದನ್ನು ವಿರೋಧಿಸಲ್ಲ: ಕೇಂದ್ರಕ್ಕೆ ಸ್ಟಾಲಿನ್

ಪಿಟಿಐ
Published 26 ಫೆಬ್ರುವರಿ 2025, 12:44 IST
Last Updated 26 ಫೆಬ್ರುವರಿ 2025, 12:44 IST
<div class="paragraphs"><p>ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ </p></div>

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್

   

ಚೆನ್ನೈ: ‘ಹಿಂದಿಯನ್ನು ನೀವು(ಕೇಂದ್ರ) ಹೇರದಿದ್ದರೆ ನಾವು ಅದನ್ನು ವಿರೋಧಿಸುವುದಿಲ್ಲ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.

ಭಾಷಾ ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಮತ್ತು ತಮಿಳುನಾಡಿನ ನಡುವೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪಕ್ಷದ ಸದಸ್ಯರಿಗೆ ಪತ್ರ ಬರೆದಿರುವ ಅವರು, ‘ಭಾಷಾ ವಿಚಾರದಲ್ಲಿ ಆಟವಾಡಲು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಡಿಎಂಕೆ ಹಿಂದಿಯನ್ನು ಏಕೆ ವಿರೋಧಿಸುತ್ತಿದೆ ಎಂದು ಕೇಳಿವವರಿಗೆ ಇದು ನನ್ನ ಪ್ರತಿಕ್ರಿಯೆಯಾಗಿದೆ. ಭಾಷೆಯನ್ನು ಹೇರದಿದ್ದರೆ ವಿರೋಧಿಸುವ ಪ್ರಮೇಯವೇ ಬರುವುದಿಲ್ಲ. ತಮಿಳುನಾಡಿನಲ್ಲಿ ಹಿಂದಿ ಅಕ್ಷರಗಳ ಮೇಲೆ ಮಸಿ ಬಳಿಯುತ್ತಲೂ ಇರಲಿಲ್ಲ. ಸ್ವಾಭಿಮಾನದ ವಿಚಾರದಲ್ಲಿ ತಮಿಳಿಗರು ರಾಜಿಯಾಗುವುದಿಲ್ಲ ’ ಎಂದು ಹೇಳಿದ್ದಾರೆ.

ಇದೇ ವೇಳೆ 1937ರ ಹಿಂದಿ ವಿರೋಧಿ ಆಂದೋಲವನ್ನು ನೆನಪಿಸಿದ ಸ್ಟಾಲಿನ್‌, ಇ.ವಿ ರಾಮಸ್ವಾಮಿ, ಪೆರಿಯಾರ್‌ನಂತಹ ನಾಯಕರು ಈ ಆಂದೋಲನದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಇಂದು ಹಿಂದಿ, ನಾಳೆ ಸಂಸ್ಕೃತವನ್ನು ಹೇರುವ ಹುನ್ನಾರವನ್ನು ಕೇಂದ್ರ ಮಾಡುತ್ತಿದೆ. ಇದರ ವಿರುದ್ಧ ತಮಿಳುನಾಡು ಸೆಟೆದು ನಿಂತಿದೆ. ದ್ರಾವಿಡ ನಾಯಕರು ವರ್ಷಗಳ ಹಿಂದೆಯೇ ಇದಕ್ಕೆ ವೇದಿಕೆ ಹಾಕಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

‘ತಮಿಳರ ಬಗ್ಗೆಯೂ ಕಾಳಜಿ ಇರಲಿ’

ರೈಲು ನಿಲ್ದಾಣದ ಹಿಂದಿ ನಾಮಫಲಕಗಳಿಗೆ ಮಸಿ ಬಳಿಯುವುರಿಂದ ತಮಿಳುನಾಡಿಗೆ ಬರುವ ಉತ್ತರ ಭಾರತದ ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ ಎಂಬ ಕೆಲ ಬಿಜೆಪಿ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಸ್ಟಾಲಿನ್‌, ‘ತಮಿಳರ ಬಗ್ಗೆಯೂ ನಿಮಗೆ ಇದೇ ರೀತಿಯ ಕಾಳಜಿ ಇರಬೇಕಿತ್ತು’ ಎಂದಿದ್ದಾರೆ.

‘ಕಾಶಿ ಮತ್ತು ಕುಂಭಮೇಳಕ್ಕೆ ತೆರಳುವ ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳ ಜನರಿಗೆ ಅನುಕೂಲವಾಗುವಂತೆ ಉತ್ತರ ಪ್ರದೇಶದಲ್ಲಿ ಹಿಂದಿಯೇತರ ಭಾಷೆಗಳಲ್ಲಿ ನಾಮಫಲಕಗಳನ್ನು ಏಕೆ ಅಳವಡಿಸಲಿಲ್ಲ ಎಂದು ನೀವು ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಲ್ಲಿ ಕೇಳಬೇಕಿತ್ತು’ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.