ADVERTISEMENT

ಚಂದ್ರಯಾನ–3: ಭಾರತದ ಯಶಸ್ಸನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ– ಜೈಶಂಕರ್

ಪಿಟಿಐ
Published 23 ಡಿಸೆಂಬರ್ 2023, 5:15 IST
Last Updated 23 ಡಿಸೆಂಬರ್ 2023, 5:15 IST
<div class="paragraphs"><p>ಎಸ್. ಜೈಶಂಕರ್</p></div>

ಎಸ್. ಜೈಶಂಕರ್

   

ಪಿಟಿಐ

ಚೆನ್ನೈ: ‘ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ–3 ಯೋಜನೆಯ ಲ್ಯಾಂಡರ್‌ ವಿಕ್ರಮ್, ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿದಿದ್ದನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ADVERTISEMENT

ಭಾರತೀಯ ಕೈಗಾರಿಕೆಗಳ ಒಕ್ಕೂಟದ ಯುವ ಘಟಕ ಆಯೋಜಿಸಿದ್ದ ‘ಟೇಕ್‌ ಪ್ರೈಡ್‌ 2023’ ರಾಷ್ಟ್ರೀಯ ಸಮಾವೇಶದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

‘ದೇಶದ ಅಭಿವೃದ್ಧಿಯಲ್ಲಿ ದೊಡ್ಡ ಕೊಡುಗೆ ನೀಡುತ್ತಿರುವ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಅಪಾಯ ಮಟ್ಟವನ್ನು ತಗ್ಗಿಸುವುದು ಹಾಗೂ ಅವಕಾಶಗಳನ್ನು ಹೆಚ್ಚಿಸುವುದು ಭಾರತದ ಯೋಜನೆಯಾಗಿದೆ. ಚಂದ್ರಯಾನ–3 ಯೋಜನೆ ಸಫಲವಾದ ದಿನ ನಾನು ಪ್ರಧಾನಿ ಅವರೊಂದಿಗೆ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ) ಸಮಾವೇಶದಲ್ಲಿದ್ದೆ. ಆ ಸಂದರ್ಭದಲ್ಲಿ ಅಲ್ಲಿದ್ದ ಆಫ್ರಿಕಾದ ಮುಖಂಡರು ಭಾರತದ ಸಾಧನೆಯನ್ನು ಮನಸಾರೆ ಹೊಗಳಿದರು. ಈ ಸಾಧನೆ ದೇಶದ ಮೇಲೆ ಬಹಳಷ್ಟು ಗೌರವ ಹಾಗೂ ನಿರೀಕ್ಷೆಗಳನ್ನು ಹೆಚ್ಚಿಸಿದೆ’ ಎಂದರು.

‘ಭಾರತ ಎಂದಾಕ್ಷಣ ಪ್ರತಿಭೆ, ತಂತ್ರಜ್ಞಾನ ಮತ್ತು ಪರಂಪರೆ ಎಂಬ ಮೂರು ಅಂಶಗಳು ಜಗತ್ತಿನಲ್ಲಿರುವ ಜನರ ಮನಸ್ಸಿನಲ್ಲಿ ಮೂಡುತ್ತದೆ. ಇತ್ತೀಚೆಗೆ ಸ್ವೀಡನ್‌ಗೆ ಭೇಟಿ ನೀಡಿದ್ದೆ. ಅಲ್ಲಿ ನಾರ್ಡಿಕ್ ರಾಷ್ಟ್ರಗಳ ಸದಸ್ಯರು ಸೇರಿದ್ದರು. ಭಾರತದಲ್ಲಿ ಕ್ರಿಕೆಟ್ ಕುರಿತು ಮಾತನಾಡಿದಂತೆ, ಅಲ್ಲಿ ಟೆಲಿಕಾಂ ಕುರಿತ ಮಾತನಾಡುತ್ತಾರೆ. ಅವರು ಭಾರತದಲ್ಲಿನ 5ಜಿ ತಂತ್ರಜ್ಞಾನದ ಅನುಷ್ಠಾನ ಕುರಿತು ಹುಬ್ಬೇರಿಸಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ.

‘ಭಾರತದಲ್ಲಿ ಪ್ರತಿಭೆಗಳು ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಜಗತ್ತಿನ 500 ಫಾರ್ಚ್ಯೂನ್ ಕಂಪನಿಗಳು ಇಲ್ಲಿ ತಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸಿದ್ದಾರೆ. ಬ್ರಾಂಡ್ ಇಂಡಿಯಾ ಎಂಬ ಪರಿಕಲ್ಪನೆಯು ನಾವು ಏನು ಮತ್ತು ನಾವು ಯಾರು ಎಂಬುದನ್ನು ತೋರಿಸಿದೆ. ನಮ್ಮ ಈಗಿನ ಸಾಧನೆ ಮತ್ತು ಕೊಡುಗೆಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯಿಂದ ಬಂದವುಗಳೇ ಆಗಿವೆ’ ಎಂದು ಜೈಶಂಕರ್ ಹೇಳಿದ್ದಾರೆ.

‘ಈ ಅಮೃತ ಕಾಲವು ಭಾರತದ ಯುವಕರದ್ದಾಗಿದೆ. ವಿಕಸಿತ ಭಾರತ ನಿರ್ಮಾಣದ ಗುರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಒಂದು ದಶಕದಲ್ಲಿ ಭದ್ರ ಬುನಾದಿ ಹಾಕಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.