
ಸಾಂದರ್ಭಿಕ ಚಿತ್ರ
ನವದೆಹಲಿ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ‘ಲಷ್ಕರ್-ಎ-ತಯಬಾ’ಕ್ಕೆ ಯುವಕರನ್ನು ನೇಮಕ ಮಾಡಿಕೊಳ್ಳುವ ಮತ್ತು ಭಯೋತ್ಪಾದನಾ ಕೃತ್ಯದಲ್ಲಿ ಭಾಗಿಯಾಗಿದ್ದಕ್ಕಾಗಿ ಉತ್ತರ ಕನ್ನಡದ ಸಯ್ಯದ್ ಎಂ.ಇದ್ರಿಸ್ ಎಂಬಾತನಿಗೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಇದ್ರೀಸ್‌ಗೆ ಕೋಲ್ಕತ್ತದ ವಿಶೇಷ ನ್ಯಾಯಾಲಯವು ಶಿಕ್ಷೆ ಹಾಗೂ ₹70 ಸಾವಿರ ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ ಎಂದು ಎನ್‌ಐಎ ಪತ್ರಿಕಾ ಹೇಳಿಕೆ ತಿಳಿಸಿದೆ.
ಆರಂಭದಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ 2020ರ ಏಪ್ರಿಲ್‌ನಲ್ಲಿ ಹಸ್ತಾಂತರಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಅಲ್ತಾಫ್ ಅಹ್ಮದ್ ರಾದರ್ ಹಾಗೂ ಇದ್ರಿಸ್ ಅವರನ್ನು ತನಿಖಾ ದಳ ಬಂಧಿಸಿತ್ತು.
ಪಶ್ಚಿಮ ಬಂಗಾಳದಲ್ಲಿ ಲಷ್ಕರ್‌ಗೆ ಸ್ಥಳೀಯ ಯುವಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ತಾನಿಯಾ ಪರ್ವೀನ್ ಜತೆಗೆ ಇದ್ರಿಸ್ ಹಾಗೂ ರಾದರ್ ಸಂಚು ರೂಪಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.
ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ತನಿಖಾ ದಳವು ಉತ್ತರ 24 ಪರಗಣ ಜಿಲ್ಲೆಯ ಬದುರಿಯಾದಲ್ಲಿ 2020ರ ಮಾರ್ಚ್‌ನಲ್ಲಿ ಕಾರ್ಯಾಚರಣೆ ನಡೆಸಿ ತಾನಿಯಾ ಅವರನ್ನು ಬಂಧಿಸಿತ್ತು. ಶೋಧದ ಸಮಯದಲ್ಲಿ ತನಿಖಾ ತಂಡವು ಜಿಹಾದಿ ಪುಸ್ತಕ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿತ್ತು ಎಂದು ಹೇಳಿಕೆ ತಿಳಿಸಿದೆ.
ಬಂಧಿತ ಮೂವರು ಆರೋಪಿಗಳು ಹಾಗೂ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಇಬ್ಬರ ವಿರುದ್ಧ ರಾಷ್ಟ್ರೀಯ ತನಿಖಾ ದಳವು 2020ರ ಸೆಪ್ಟೆಂಬರ್ ಹಾಗೂ 2021ರ ಮೇ ತಿಂಗಳಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ತಲೆಮರೆಸಿಕೊಂಡಿರುವ ಇಬ್ಬರ ವಿರುದ್ಧ ರೆಡ್ ಹಾಗೂ ಬ್ಲೂ ಕಾರ್ನರ್ ನೋಟಿಸ್‌ಗಳನ್ನು ಹೊರಡಿಸಲಾಗಿದೆ ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.