ADVERTISEMENT

ದೆಹಲಿ: ಹೆಚ್ಚುತ್ತಿದೆ ಸೋಂಕಿತರ ಪ್ರಮಾಣ; 11 ದಿನಗಳಲ್ಲಿ 57,418 ಪ್ರಕರಣ

ಸಿದ್ದಯ್ಯ ಹಿರೇಮಠ
Published 5 ನವೆಂಬರ್ 2020, 6:08 IST
Last Updated 5 ನವೆಂಬರ್ 2020, 6:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಹರಡುವಿಕೆಯ 3ನೇ ಅಲೆ ಆರಂಭವಾಗಿದ್ದು, ಕಳೆದ 11 ದಿನಗಳಲ್ಲಿ 57,000ಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿದೆ.

ಅಕ್ಟೋಬರ್‌ 25ರಿಂದ ನವೆಂಬರ್‌ 4ರವರೆಗೆ ಒಟ್ಟು 57,418 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದೇ ವೇಳೆ, ಕೊರೊನಾ ಸೋಂಕಿಗೆ ಒಳಗಾಗಿದ್ದ 478 ರೋಗಿಗಳು ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿ ಸಾವಿಗೀಡಾಗಿರುವುದು ವರದಿಯಾಗಿದೆ.

ದಸರಾ ಹಬ್ಬದ ಖರೀದಿಗಾಗಿ ಮಾರುಕಟ್ಟೆಯಲ್ಲಿ ಕಂಡುಬಂದ ಜನದಟ್ಟಣೆಯು ಸೋಂಕು ಹರಡಲು ಪ್ರಮುಖ ಕಾರಣವಾಗಿದೆ. ದೀಪಾವಳಿ ಸಂದರ್ಭ ಸೋಂಕು ಮತ್ತಷ್ಟು ಹರಡದಂತೆ ತಡೆಯುವ ನಿಟ್ಟಿನಲ್ಲಿ ಗುಂಪು ಸೇರದೆ ಸಹಕರಿಸಬೇಕು ಎಂದು ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ADVERTISEMENT

ಕಳೆದ 15 ದಿನಗಳಿಂದ ದೆಹಲಿಯೂ ಒಳಗೊಂಡಂತೆ ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್‌)ದಲ್ಲಿ ವಾಯು ಮಾಲಿನ್ಯ ಹೆಚ್ಚಿರುವುದು ಕೊರೊನಾ ಸೋಂಕಿತರಲ್ಲಿ ಉಸಿರಾಟದ ಸಮಸ್ಯೆಯನ್ನು ತೀವ್ರಗೊಳಿಸಿದೆ. ಮಾಲಿನ್ಯದಿಂದಾಗಿ ಸಾವಿನ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ.

ಅಕ್ಟೋಬರ್‌ 25ರಿಂದ ಕೊರೊನಾ ಪರೀಕ್ಷೆಗೆ ಒಳಪಟ್ಟವರ ಪೈಕಿ, ಪಾಸಿಟಿವ್‌ ಪ್ರಮಾಣ ಶೇ 7ಕ್ಕಿಂತ ಅಧಿಕ ಪ್ರಮಾಣದಲ್ಲಿ ದಾಖಲಾಗುತ್ತ ಸಾಗಿದೆ. ಕಳೆದ ಸೋಮವಾರದಂದು ಶೇ 12.69 ತಲುಪಿರುವುದು ಇದುವರೆಗೆ ದಿನವೊಂದರಲ್ಲಿ ಸೋಂಕು ಪತ್ತೆಯಾದ ಅತ್ಯಧಿಕ ಶೇಕಡಾವಾರು ಪ್ರಮಾಣವಾಗಿದೆ.

ಬುಧವಾರ ಪರೀಕ್ಷೆಗೆ ಒಳಗಾಗಿರುವ 58,910 ಜನರ ಪೈಕಿ 6,842 (ಶೇ 11.29) ಜನ ಸೋಂಕಿಗೆ ಒಳಗಾಗಿದ್ದಾರೆ.

ಸೋಂಕಿಗೆ ಒಳಗಾದ ಶೇ 70ಕ್ಕೂ ಅಧಿಕ ಜನ ಮನೆಗಳಲ್ಲೇ ಕ್ವಾರಂಟೈನ್‌ ಆಗುತ್ತಿದ್ದು, ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾದವರಷ್ಟೇ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.

ಕಳೆದ 15 ದಿನಗಳ ಅವಧಿಯಲ್ಲಿ ಗುಣಮುಖರ ಪ್ರಮಾಣದಲ್ಲೂ ಏರಿಕೆ ಕಂಡುಬಂದಿರುವುದು ಸಮಾಧಾನಕರ ವಿಷಯವಾಗಿದೆ. ತೀವ್ರಗೊಳ್ಳಲಿರುವ ಚಳಿ ಹಾಗೂ ಹಬ್ಬದ ಕಾರಣ ಮುಂದಿನ ದಿನಗಳಲ್ಲಿ ನಿತ್ಯ 15,000 ಪ್ರಕರಣಗಳು ವರದಿಯಾಗುವ ಸಾಧ್ಯತೆ ಇರುವುದಾಗಿ ಆರೋಗ್ಯ ಇಲಾಖೆಯ ಪರಿಣತರ ತಂಡ ಎಚ್ಚರಿಕೆ ನೀಡಿದೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

**
ದಿನಾಂಕ ಪಾಸಿಟಿವ್ ಪ್ರಕರಣಗಳು (ಶೇಕಡಾವಾರು) ಸಾವು

ಅಕ್ಟೋಬರ್ 25– 4136 (8.43) 33
ಅಕ್ಟೋಬರ್ 26– 2832(8.23) 54
ಅಕ್ಟೋಬರ್ 27– 4853 (8.48) 44
ಅಕ್ಟೋಬರ್ 28– 5673 (9.37) 40
ಅಕ್ಟೋಬರ್ 29– 5739 (9.55) 27
ಅಕ್ಟೋಬರ್ 30– 5891 (9.88) 47
ಅಕ್ಟೋಬರ್ 31– 5062 (11.42) 41
ನವೆಂಬರ್‌ 1– 5664 (12.69) 51
ನವೆಂಬರ್‌ 2– 4001 (10.91) 42
ನವೆಂಬರ್‌ 3– 6725 (11.29) 48
ನವೆಂಬರ್‌ 4– 6842 (11.61) 51

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.