ADVERTISEMENT

ಭಿನ್ನಮತದಿಂದ ಸೀಟು ಕಳೆದುಕೊಂಡ ಯುಡಿಎಫ್; ಬಿಜೆಪಿಗೆ 7 ಸಾವಿರ ಮತಗಳ ಇಳಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 11:30 IST
Last Updated 27 ಸೆಪ್ಟೆಂಬರ್ 2019, 11:30 IST
ಬಿಜೆಪಿ ಅಭ್ಯರ್ಥಿ ಹರಿ.ಎನ್
ಬಿಜೆಪಿ ಅಭ್ಯರ್ಥಿ ಹರಿ.ಎನ್   

ಕೋಟ್ಟಯಂ:ಯುಡಿಎಫ್ ಭದ್ರಕೋಟೆಯಾಗಿದ್ದ ಪಾಲಾ ಚುನಾವಣಾ ಕ್ಷೇತ್ರದಲ್ಲಿನ ಉಪಚುನಾವಣೆಯಲ್ಲಿಎಲ್‌ಡಿಎಫ್ ಐತಿಹಾಸಿಕ ಗೆಲುವು ಸಾಧಿಸಿದೆ. 1965ರಲ್ಲಿ ಪಾಲಾ ವಿಧಾನಸಭಾ ಕ್ಷೇತ್ರ ರಚನೆಯಾಗಿತ್ತು. ಈ ಚುನಾವಣಾ ಕ್ಷೇತ್ರ ರಚನೆಯಾದ ಅಂದಿನಿಂದ ಇಂದಿನವರೆಗೆ ಅಂದರೆ 54 ವರ್ಷಗಳ ಕಾಲ ಇಲ್ಲಿ ಯುಡಿಎಫ್ ಅಧಿಪತ್ಯವಿತ್ತು. ಕೆ.ಎಂ.ಮಾಣಿ ನಿಧನರಾದ ಕಾರಣ ತೆರವಾಗಿದ್ದ ಪಾಲಾ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಮಾಣಿ.ಸಿ.ಕಾಪ್ಪನ್ ಮೂಲಕ ಎಲ್‌ಡಿಎಫ್ ವಿಜಯ ಪತಾಕೆ ಹಾರಿಸಿದೆ.

ಭಿನ್ನಾಭಿಪ್ರಾಯಗಳಿಂದಾಗಿ ಯುಡಿಎಫ್ ನಾಯಕರು ಪರಸ್ಪರ ಕಚ್ಚಾಡಿದ್ದೇ ಪಾಲಾ ಸೀಟು ನಷ್ಟವಾಗಲು ಕಾರಣ ಎಂದು ಹೇಳಲಾಗುತ್ತಿದೆ. ಅದೇ ವೇಳೆ ಬಿಜೆಪಿಗೆ ಈ ಬಾರಿ ಮತ ಕಡಿಮೆಯಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಭಿಸಿದ ಮತಗಳಿಗಿಂತ ಏಳು ಸಾವಿರ ಮತ ಮತ್ತು ಲೋಕಸಭಾ ಚುನಾವಣೆಯಲ್ಲಿ ಲಭಿಸಿದ ಮತಗಳಿಗಿಂತ ಎಂಟು ಸಾವಿರದಷ್ಟು ಮತಗಳು ಬಿಜೆಪಿಗೆ ಕಡಿಮೆಯಾಗಿದೆ.

ADVERTISEMENT

ಮತ ಎಣಿಕೆ ಆರಂಭವಾದಾಗ ರಾಮಪುರ ಪಂಚಾಯತ್‌ನಲ್ಲಿ ಮಾಣಿ.ಸಿ. ಕಾಪ್ಪನ್ ಮುನ್ನಡೆ ಸಾಧಿಸಿದಾಗಲೇ ಬಿಜೆಪಿಗೆ ಕಡಿಮೆ ಮತ ಲಭಿಸಿದ್ದು ಯಾಕೆ ಎಂಬ ಚರ್ಚೆ ಆರಂಭವಾಗಿತ್ತು. ರಾಮಪುರದಲ್ಲಿ ಬಿಜೆಪಿಯ ಮತಗಳು ಎಲ್‌ಡಿಎಫ್‌ಗೆ ಸಿಕ್ಕಿದೆ ಎಂದು ಯುಡಿಎಫ್ ಅಭ್ಯರ್ಥಿ ಜಾಸ್ ಟಾಮ್ಆರೋಪಿಸಿದ್ದಾರೆ. ಜೋಸ್.ಕೆ. ಮಾಣಿ ಮತ್ತು ಉಮ್ಮನ್ ಚಾಂಡಿ ಕೂಡಾ ಇದೇ ಆರೋಪವನ್ನು ಮಾಡಿದ್ದಾರೆ.

ಮಿತ್ರಪಕ್ಷವಾದ ಬಿಡಿಜೆಎಸ್ ಮತಗಳು ಕೂಡಾ ಎನ್‌ಡಿಎ ಅಭ್ಯರ್ಥಿ ಎನ್. ಹರಿ ಅವರಿಗೆ ಲಭಿಸಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿದೆ.

2016ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎನ್. ಹರಿ ಅವರಿಗೆ 24, 821 ಮತಗಳು ಲಭಿಸಿತ್ತು. ಹರಿ ಅವರನ್ನೇ ಮತ್ತೆ ಕಣಕ್ಕಿಳಿಸಿದಾಗ ಸಿಕ್ಕಿದ್ದು 18,044 ಮತಗಳು ಮಾತ್ರ. ಶಬರಿಮಲೆ ವಿವಾದ ಮತ್ತು ಪಿಣರಾಯಿ ಸರ್ಕಾರದ ತಪ್ಪುಗಳನ್ನು ಎತ್ತಿ ಹಿಡಿದು ಬಿಜೆಪಿ ಪ್ರಚಾರ ನಡೆಸಿದ್ದರೂ ಫಲ ಸಿಗಲಿಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪಿ.ಸಿ. ಥಾಮಸ್ ಅವರಿಗೆ 26,533 ಮತಗಳು ಲಭಿಸಿತ್ತು. ಆದರೆ ಈ ಬಾರಿ ಇಲ್ಲಿ8, 489 ಮತಗಳ ಅಂತರ ಕಂಡುಬಂದಿದೆ.

ಮತ ಸೋರಿಕೆಯಾಗಿದ್ದು ಹೇಗೆ ಎಂಬುದರ ಬಗ್ಗೆ ಅವಲೋಕನ ನಡೆಸುವುದಾಗಿಜಿಲ್ಲಾಧ್ಯಕ್ಷರಾದ ಎನ್. ಹರಿ ಹೇಳಿದ್ದು ಪಕ್ಷದೊಳಗೆ ಇದು ಬಹುಚರ್ಚಿತ ವಿಷಯವಾಗಲಿದೆ.

ಹಣ ಪಡೆದು ಎನ್. ಹರಿ ಮತಗಳನ್ನು ಯುಡಿಎಫ್‌ಗೆ ನೀಡಿದ್ದಾರೆ ಎಂದು ಪಾಲಾ ಬಿಜೆಪಿ ಅಧ್ಯಕ್ಷ ವಕೀಲ ಬಿನು ಪುಳಿಕ್ಕಕ್ಕಡಂ ಆರೋಪಿಸಿದ್ದರು. ಚುನಾವಣೆಗೆ ಮುನ್ನ ಬಿನು ಈಆರೋಪ ಮಾಡಿದ್ದು , 5000 ಮತಗಳನ್ನು ಯುಡಿಎಫ್‌ಗೆ ನೀಡುವುದಾಗಿ ಹರಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದಿದ್ದರು. ಇದು ವಿವಾದವಾಗುತ್ತಿದ್ದಂತೆ ಬಿನು ಅವರನ್ನು ಪಕ್ಷದಿಂದ ವಜಾ ಮಾಡಲಾಗಿತ್ತು.

ಅಭ್ಯರ್ಥಿ ತೀರ್ಮಾನವಾದ ದಿನದಿಂದಲೇ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ ಎಂಬ ಸುದ್ದಿ ಹರಡಿತ್ತು. ಹರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ಅದೇ ಚುನಾವಣಾ ಕ್ಷೇತ್ರದಲ್ಲಿರುವ ನಾಯಕನನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುದು ಬಿಜೆಪಿ ನಾಯಕರು ಒತ್ತಾಯಿಸಿದ್ದರೂ ಹರಿ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವುದಾಗಿ ರಾಜ್ಯ ಬಿಜೆಪಿ ನಾಯಕತ್ವ ಪಟ್ಟು ಹಿಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.