ADVERTISEMENT

Kerala | ಕೇಂದ್ರದ ವಿರುದ್ಧ ದೆಹಲಿಯಲ್ಲಿ ಎಲ್‌ಡಿಎಫ್‌ ಪ್ರತಿಭಟನೆ

ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌

ಪಿಟಿಐ
Published 7 ಫೆಬ್ರುವರಿ 2024, 14:23 IST
Last Updated 7 ಫೆಬ್ರುವರಿ 2024, 14:23 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ತಿರುವನಂತಪುರ: ಆರ್ಥಿಕ ವಿಚಾರಗಳಲ್ಲಿ ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್‌ ಗುರುವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ನೀಡಿದ್ದ ಆಹ್ವಾನವನ್ನು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ತಿರಸ್ಕರಿಸಿದೆ. ಆದರೆ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಕೇರಳದ ಆಡಳಿತಾರೂಢ ಎಲ್‌ಡಿಎಫ್‌ನ ಸಚಿವರು, ಶಾಸಕರು ಮತ್ತು ಸಂಸದರು ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಎಲ್ಲ ರಾಜ್ಯಗಳ ಸಾಂವಿಧಾನಿಕ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯಗಳಿಗೆ ನ್ಯಾಯಯುತವಾಗಿ ದೊರೆಯಬೇಕಾದ ಪಾಲನ್ನು ಕೇಳುವುದು ಪ್ರತಿಭಟನೆಯ ಉದ್ದೇಶವಾಗಿದೆ ಎಂದು ವಿಜಯನ್‌ ಹೇಳಿದ್ದಾರೆ.

‘ಹಣಕಾಸಿನ ಸಂಯುಕ್ತ ವ್ಯವಸ್ಥೆಯ ರಕ್ಷಣೆಗಾಗಿ ನಡೆಯುವ ಈ ಪ್ರತಿಭಟನೆಗೆ ತಮ್ಮ ಬೆಂಬಲ ಇದೆ’ ಎಂದು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ ಹೇಳಿದ್ದಾರೆ. 

ರಾಜ್ಯದ ಎಲ್ಲ ಆರ್ಥಿಕ ಸಮಸ್ಯೆಗಳಿಗೆ ಕೇಂದ್ರವನ್ನು ದೂಷಿಸುವ ಎಡಪಕ್ಷದ ಧೋರಣೆ ಸರಿಯಲ್ಲ ಎಂದು ಹೇಳಿರುವ ಯುಡಿಎಫ್‌, ಪ್ರತಿಭಟನೆಯಲ್ಲಿ ಭಾಗವಹಿಸಲು ನಿರಾಕರಿಸಿದೆ. ಕೇರಳದ ಆರ್ಥಿಕ ಸಂಕಷ್ಟಕ್ಕೆ ರಾಜ್ಯ ಸರ್ಕಾರದ ದುರುಪಯೋಗವೇ ಮುಖ್ಯ ಕಾರಣ. ತೆರಿಗೆ ಸಂಗ್ರಹ, ಚಿನ್ನದ ಮಾರಾಟ, ಐಜಿಎಸ್‌ಟಿಯಲ್ಲಿ ತನ್ನ ಪಾಲು ಸ್ವೀಕಾರ ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯ ಸರ್ಕಾರದ ಲೋಪಗಳಿಂದ ಆರ್ಥಿಕವಾಗಿ ಕೆಟ್ಟ ಪರಿಸ್ಥಿತಿ ಎದುರಾಗಿದೆ ಎಂದು ಯುಡಿಎಫ್‌ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.