ADVERTISEMENT

ಮಹಾರಾಷ್ಟ್ರ ಚುನಾವಣೆಯಲ್ಲಿ ‘ಮತ ಕಳ್ಳತನ’: EC ವಿರುದ್ಧ ರಾಹುಲ್ ಮತ್ತೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 1:16 IST
Last Updated 25 ಜೂನ್ 2025, 1:16 IST
   

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವಿಚಾರ ಮುಂದಿಟ್ಟುಕೊಂಡು, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧದ ವಾಗ್ದಾಳಿಯನ್ನು ಮಂಗಳವಾರ ಮತ್ತಷ್ಟು ಹರಿತಗೊಳಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ‘ಮತ ಕಳ್ಳತನ’ ನಡೆದಿದೆ ಎಂದು ಆರೋಪಿಸಿರುವ ಅವರು, ‘ಈ ವಿಚಾರವನ್ನು ‘ಮುಚ್ಚಿ ಹಾಕುವುದಕ್ಕಾಗಿ’ ನಡೆಸಿದ ಪ್ರಯತ್ನಗಳು ಚುನಾವಣಾ ಆಯೋಗದ ತಪ್ಪೊಪ್ಪಿಗೆಯೇ ಆಗಿದೆ’ ಎಂದು ಆರೋಪಿಸಿದ್ದಾರೆ.

‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ, ಮತ ಯಂತ್ರಗಳಲ್ಲಿ (ಇವಿಎಂ) ದಾಖಲಾಗಿರುವ ಮತದಾರರ ವಿವರಗಳು ಹಾಗೂ ಸಿ.ಸಿ ಟಿ.ವಿ ದೃಶ್ಯಗಳನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದೂ ಒತ್ತಾಯಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಕ್ಷೇತ್ರದಲ್ಲಿ, ಚುನಾವಣೆಗೂ ಆರು ತಿಂಗಳು ಮೊದಲು 29 ಸಾವಿರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿತ್ತು. ಈ ರೀತಿ ಮಾಡುವಾಗ ಕಡ್ಡಾಯವಾಗಿ ಕೈಗೊಳ್ಳಬೇಕಿದ್ದ ಪರಿಶೀಲನೆಯನ್ನು ನಡೆಸಿರಲಿಲ್ಲ ಎಂಬ ಮಾಧ್ಯಮಗಳಲ್ಲಿನ ವರದಿ ಉಲ್ಲೇಖಿಸಿ, ರಾಹುಲ್‌ ಗಾಂಧಿ ಈ ಟೀಕಾಪ್ರಹಾರ ನಡೆಸಿದ್ದಾರೆ.

ವರದಿ:

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡುವಿನ ಆರು ತಿಂಗಳ ಅವಧಿಯಲ್ಲಿ, ಫಡಣವೀಸ್‌ ಪ್ರತಿನಿಧಿಸುವ ನಾಗ್ಪುರ (ನೈರುತ್ಯ) ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ, ಮತದಾರರ ಸಂಖ್ಯೆಯಲ್ಲಿ ಶೇ8.25ರಷ್ಟು ಹೆಚ್ಚಳ ಕಂಡುಬಂದಿತ್ತು. ಕೆಲ ಬೂತ್‌ಗಳಲ್ಲಿ ಮತದಾರರ ಸಂಖ್ಯೆಯಲ್ಲಿನ ಹೆಚ್ಚಳ ಶೇ 20 ರಿಂದ ಶೇ 50ರಷ್ಟಿತ್ತು ಎಂದು ‘ನ್ಯೂಸ್‌ಲಾಂಡ್ರಿ’ ವರದಿ ಮಾಡಿದೆ.

‘ಹೊಸದಾಗಿ ಸೇರ್ಪಡೆಯಾಗುವ ಮತದಾರರ ಪ್ರಮಾಣ ಶೇ 4ಕ್ಕಿಂತ ಹೆಚ್ಚು ಆಗಿರುವುದು ಕಂಡುಬಂದಲ್ಲಿ, ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು ಎಂಬುದು ಚುನಾವಣಾ ಆಯೋಗದ ನಿಯಮ. ಆದರೆ, ಈ ಕ್ಷೇತ್ರದಲ್ಲಿನ ಹೆಚ್ಚಳ ಶೇ 8.25ರಷ್ಟು ಇದ್ದರೂ, ಹಲವು ಮತಗಟ್ಟೆಗಳಲ್ಲಿ ಪರಿಶೀಲನೆ ನಡೆಸಿಲ್ಲ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಕನಿಷ್ಠ 4 ಸಾವಿರ ಮತದಾರರು ವಿಳಾಸ ಹೊಂದಿಯೇ ಇಲ್ಲ. ಶೇ 70ರಷ್ಟು ಬೂತ್‌ಗಳಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾದ ಮತದಾರರ ಪ್ರಮಾಣ ಶೇ4ಕ್ಕಿಂತಲೂ ಹೆಚ್ಚು. ಶೇ 26ರಷ್ಟು ಬೂತ್‌ಗಳಲ್ಲಿ ಈ ಪ್ರಮಾಣ ಶೇ 20ರಷ್ಟಿದ್ದರೆ, ನಾಲ್ಕು ಬೂತ್‌ಗಳಲ್ಲಿ ಇದು ಶೇ 40ಕ್ಕಿಂತಲೂ ಹೆಚ್ಚು ಇತ್ತು’ ಎಂದು ‘ನ್ಯೂಸ್‌ಲಾಂಡ್ರಿ’ ವರದಿ ಮಾಡಿದೆ. ಆದರೆ, ಈ ಆರೋಪಗಳನ್ನು ಚುನಾವಣಾ ಆಯೋಗ ತಳ್ಳಿಹಾಕಿತ್ತು.

ರಾಹುಲ್‌ ಆರೋಪ: ‘ಅಪರಿಚಿತ ವ್ಯಕ್ತಿಗಳು ಮತ ಚಲಾಯಿಸುತ್ತಿದ್ದರು ಎಂಬುದನ್ನು ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ವರದಿ ಮಾಡಿದ್ದಾರೆ. ಪರಿಶೀಲನೆಗೆ ಒಳಗಾಗದೇ ಇರುವಂತಹ ವಿಳಾಸ ಹೊಂದಿದ್ದ ಸಾವಿರಾರು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು ಎಂಬುದನ್ನು ಸಹ ಮಾಧ್ಯಮಗಳು ಬಹಿರಂಗಪಡಿಸಿವೆ’ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

‘ಮತದಾನದ ವೇಳೆಯ ಈ ಅಕ್ರಮಗಳ ಕುರಿತಂತೆ ಚುನಾವಣಾ ಆರೋಗ ಏನು ಮಾಡುತ್ತಿತ್ತು? ಅದು ಮೌನವಾಗಿತ್ತು ಇಲ್ಲವೇ ಇಂತಹ ಅಕ್ರಮಕ್ಕೆ ಕೈಜೋಡಿಸಿತ್ತು’ ಎಂದಿದ್ದಾರೆ.

ಮಹಾರಾಷ್ಟ್ರ ಚುನಾವಣೆಯ ‘ಮಹಾ ಹಗರಣ’ವು ಮತ್ತಷ್ಟು ಅಕ್ರಮಗಳನ್ನು ಬಹಿರಂಗ ಮಾಡುತ್ತಿದೆ. ಮತದಾರರ ಸಂಖ್ಯೆಯಲ್ಲಿನ ಅಸಂಬದ್ಧ ಹೆಚ್ಚಳ ಕುರಿತು ಚುನಾವಣಾ ಆಯೋಗದ ಮೌನವು ಅಕ್ರಮಗಳನ್ನು ಮುಚ್ಚಿ ಹಾಕುವ ಅದರ ಪ್ರಯತ್ನಗಳತ್ತ ಬೊಟ್ಟು ಮಾಡುತ್ತಿದೆ
- ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ)

‘ಇವು, ಅಲ್ಲೊಂದು–ಇಲ್ಲೊಂದು ಕಂಡುಬಂದ ದೋಷಗಳು ಅಲ್ಲ. ಇದು ಮತಗಳ ಕಳ್ಳತನ. ಇಂತಹ ದೋಷಗಳನ್ನು ಮುಚ್ಚಿ ಹಾಕುವುದು ತಪ್ಪೊಪ್ಪಿಗೆ ಆಗಿದೆ. ಈ ಕಾರಣಕ್ಕಾಗಿಯೇ ತಕ್ಷಣವೇ ಇವಿಎಂನಲ್ಲಿ ದಾಖಲಾಗಿರುವ ಮತದಾರರ ವಿವರಗಳನ್ನು ಹಾಗೂ ಸಿ.ಸಿ ಟಿ.ವಿ ದೃಶ್ಯಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಚುನಾವಣೆಗೆ ಸಂಬಂಧಿಸಿ ಮಾಡಿಕೊಂಡಿದ್ದ ಸಿದ್ಧತೆಗಳು ಹಾಗೂ ಖಾಸಗಿತನ ಸಂರಕ್ಷಣೆ ಕಾರಣ ನೀಡಿದ್ದ ಚುನಾವಣಾ ಆಯೋಗ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತಗಟ್ಟೆಗಳಿಗೆ ಸಂಬಂಧಿಸಿದ ಸಿ.ಸಿ ಟಿ.ವಿ ದೃಶ್ಯಗಳನ್ನು ಹಂಚಿಕೊಳ್ಳುವುದಕ್ಕೆ ಇತ್ತೀಚೆಗೆ ನಿರಾಕರಿಸಿತ್ತು.

ಹೀನಾಯ ಸೋಲಿನ ನೋವು ಹೆಚ್ಚುತ್ತಿದೆ: ಫಡಣವೀಸ್

‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಿದ ಹೀನಾಯ ಸೋಲಿನಿಂದಾಗಿರುವ ನೋವು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ ಎಂಬುದು ಅರ್ಥವಾಗುತ್ತದೆ. ಆದರೆ ಎಷ್ಟು ದಿನ ನೀವು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಇರುವಿರಿ?’ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ತಿರುಗೇಟು ನೀಡಿದ್ದಾರೆ.

‘ಕಾಂಗ್ರೆಸ್‌ ಪಕ್ಷ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದಿದ್ದು ಈ ಕ್ಷೇತ್ರಗಳಲ್ಲಿ ಮತ ಪ್ರಮಾಣದಲ್ಲಿನ ಹೆಚ್ಚಳವು ಶೇ 8ಕ್ಕಿಂತಲೂ ಅಧಿಕ’ ಎಂದೂ ಫಡಣವೀಸ್‌ ಹೇಳಿದ್ದಾರೆ. ‘ಲೋಕಸಭೆ ಚುನಾವಣೆಗೆ ಹೋಲಿಸಿದಲ್ಲಿ ವಿಧಾನಸಭೆ ಚುನಾವಣೆಯಲ್ಲಿ  ರಾಜ್ಯದ 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮತಪ್ರಮಾಣದಲ್ಲಿನ ಹೆಚ್ಚಳ ಶೇ 8ಕ್ಕಿಂತ ಅಧಿಕ ಇತ್ತು. ಅಲ್ಲದೇ ಈ ಪೈಕಿ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಕೂಡ ಗೆದ್ದಿದ್ದಾರೆ’ ಎಂದಿದ್ದಾರೆ.

‘ಎಲ್ಲ ಪಕ್ಷಗಳಿಗೂ ಮತದಾರರ ಪಟ್ಟಿಯ ಕರಡು ನೀಡಲಾಗಿತ್ತು’

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯ ಚುನಾವಣಾ ಅಧಿಕಾರಿ ‘ವಿಧಾನಸಭೆ ಚುನಾವಣೆಗೂ ಮುನ್ನ 2024ರಲ್ಲಿ ವಿಶೇಷ ಪರಿಶೀಲನೆ ನಂತರ ಮತದಾರರ ಪಟ್ಟಿಯ ಕರಡುವನ್ನು ಸಿದ್ಧಪಡಿಸಲಾಗಿತ್ತು. ಈ ಕರಡುವನ್ನು ಕಾಂಗ್ರೆಸ್‌ ಸೇರಿ ಎಲ್ಲ ಪಕ್ಷಗಳಿಗೂ ಒದಗಿಸಲಾಗಿತ್ತು’ ಎಂದು ಹೇಳಿದ್ದಾರೆ. ‘ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸುವುದಕ್ಕೂ ಮೊದಲು 1927508 ಆಕ್ಷೇಪಣೆಗಳು/ಕ್ಲೇಮುಗಳು ಸಲ್ಲಿಕೆಯಾಗಿದ್ದವು. ವಿವರಗಳ ತಪ್ಪಾಗಿ ಸೇರ್ಪಡೆ ಅಥವಾ ಅಳಿಸಿ ಹಾಕಿರುವಂತಹ ಕ್ರಮಗಳಿಗೆ ಸಂಬಂಧಿಸಿ ಕೇವಲ 89 ದೂರುಗಳನ್ನು ಸ್ವೀಕರಿಸಲಾಗಿತ್ತು’ ಎಂದೂ ಸ್ಪಷ್ಟಪಡಿಸಿದ್ದಾರೆ.

ಖುದ್ದು ಭೇಟಿ ನೀಡಿ ಚರ್ಚಿಸಿ: ರಾಹುಲ್‌ಗೆ ಆಯೋಗ ಪತ್ರ

‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಏನಾದಾರೂ ಆಕ್ಷೇಪ/ದೂರುಗಳು ಇದ್ದಲ್ಲಿ ಆಯೋಗದ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಚರ್ಚೆ ನಡೆಸುವಂತೆ’ ಚುನಾವಣಾ ಆಯೋಗವು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದಿದೆ. ‘ಚುನಾವಣೆಗಳು ಕಾನೂನು ಪ್ರಕಾರವೇ ನಡೆದಿವೆ.  ಚುನಾವಣೆ ಪ್ರಕ್ರಿಯೆಯಲ್ಲಿ ಏನಾದರೂ ಲೋಪದೋಷಗಳು ಇದ್ದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಈಗಾಗಲೇ ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಿರುತ್ತಿದ್ದರು’ ಎಂದೂ ಜೂನ್ 12ರಂದು ಬರೆದ ಪತ್ರದಲ್ಲಿ ಆಯೋಗ ಹೇಳಿದೆ. ತಾನು ಬರೆದ ಪತ್ರಕ್ಕೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿಲ್ಲ ಎಂದೂ ಆಯೋಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.