ಕೋಲ್ಕತ್ತ: ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಅನುಗುಣವಾಗಿ ಶಿಕ್ಷಕರನ್ನು ಹೊಸದಾಗಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.
ಇದರ ಜೊತೆಯಲ್ಲೇ, ಉದ್ಯೋಗ ಕಳೆದುಕೊಂಡ ಶಿಕ್ಷಕರ ಮರುನೇಮಕ ಕೋರಿ ಪುನರ್ ಪರಿಶೀಲನಾ ಅರ್ಜಿಗೆ ಸಂಬಂಧಿಸಿದ ಕೆಲಸಗಳನ್ನೂ ಮುಂದುವರಿಸಲಾಗುತ್ತದೆ ಎಂದು ಮಮತಾ ಹೇಳಿದ್ದಾರೆ.
ಕೆಲಸ ಕಳೆದುಕೊಂಡ ಶಿಕ್ಷಕರಿಗೆ ಹೊಸದಾಗಿ ನಡೆಯುವ ನೇಮಕಾತಿ ಸಂದರ್ಭದಲ್ಲಿ ಸೇವಾ ಅನುಭವದ ಪ್ರಯೋಜನ ನೀಡಲಾಗುತ್ತದೆ, ವಯೋಮಿತಿಯಲ್ಲಿ ವಿನಾಯಿತಿ ನೀಡಲಾಗುತ್ತದೆ, ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಮೇ 31ರಂದು ಹೊರಡಿಸಲಾಗುತ್ತದೆ ಎಂದು ಮಮತಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಶಾಲಾ ನೇಮಕಾತಿ ಆಯೋಗದ (ಎಸ್‌ಎಸ್‌ಸಿ) ಹಗರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪರಿಣಾಮವಾಗಿ ಕೆಲಸ ಕಳೆದುಕೊಂಡ ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಬೃಹತ್ ಪ್ರತಿಭಟನೆ ನಡೆಸಿರುವ ಹೊತ್ತಿನಲ್ಲಿ ಮಮತಾ ಈ ಮಾತು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.