ADVERTISEMENT

‘ಔಷಧ ತಯಾರಿಗೆ ಗಾಂಜಾ ಬಳಕೆ ಕಾನೂನುಬದ್ಧಗೊಳಿಸಿ’

ಓಜಾ ಫೆಸ್ಟ್‌ನಲ್ಲಿ ಆಯುಷ್‌ ತಜ್ಞರ ಅಭಿಪ್ರಾಯ

ಪಿಟಿಐ
Published 10 ಆಗಸ್ಟ್ 2019, 18:47 IST
Last Updated 10 ಆಗಸ್ಟ್ 2019, 18:47 IST

ನವದೆಹಲಿ: ಆಯುರ್ವೇದದ ಜ್ಞಾನದೊಂದಿಗೆ ಗಾಂಜಾವನ್ನು ನೋವು ನಿವಾರಣಾ ಔಷಧವಾಗಿ ಮಾರ್ಪಾಡುಗೊಳಿಸಬಹುದು. ಹೀಗಾಗಿ ಗಾಂಜಾವನ್ನು ಔಷಧೀಯ ಉತ್ಪನ್ನಗಳ ತಯಾರಿಕೆಗಾಗಿ ಕಾನೂನುಬದ್ಧಗೊಳಿಸಬೇಕು ಎನ್ನುವ ಅಭಿಪ್ರಾಯವನ್ನು ಆಯುಷ್‌ ತಜ್ಞರು ಮುಂದಿಟ್ಟಿದ್ದಾರೆ.

ಆಯುಷ್‌ ಸಚಿವಾಲಯ, ಸಿಎಸ್‌ಐಆರ್–ಐಐಐಎಂ ಸಹಯೋಗದಲ್ಲಿ ನಿರೋಗ್‌ ಸ್ಟ್ರೀಟ್‌ ಆಯೋಜಿಸಿದ್ದ 3ನೇ ಆವೃತ್ತಿಯ ಓಜಾ ಉತ್ಸವದಲ್ಲಿ ತಜ್ಞರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಗಾಂಜಾದಲ್ಲಿನ ಔಷಧೀಯ ಗುಣಗಳ ಪತ್ತೆಗೆ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಸರ್ಕಾರವೂ ಔಷಧೀಯ ಗಾಂಜಾವನ್ನು ಕಾನೂನುಬದ್ಧಗೊಳಿಸುವತ್ತ ಚಿಂತನೆ ನಡೆಸಿದೆ’ ಎಂದು ಜಮ್ಮುವಿನಸಿಎಸ್‌ಐಆರ್‌–ಐಐಎಂನ ಡಾ.ಸೌರಭ್‌ ಶರಣ್‌ ತಿಳಿಸಿದರು.

‘ಗಾಂಜಾದ ಮೇಲೆ ಸಂಶೋಧನೆ ನಡೆಸುವ ಒಪ್ಪಿಗೆಯನ್ನು ಸರ್ಕಾರಸಿಎಸ್‌ಐಆರ್‌ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಟಿಗ್ರೇಟಿವ್‌ ಮೆಡಿಸಿನ್‌ ಸಂಸ್ಥೆಗೆ ನೀಡಿದೆ. ಇಲ್ಲಿ ಹಲವು ಬಗೆಯ ಬೀಜಗಳ ಅಧ್ಯಯನ ನಡೆಸಲಾಗುತ್ತಿದೆ’ ಎಂದರು.

ADVERTISEMENT

‘ವೇದಗಳಲ್ಲಿ ಗಾಂಜಾ ಗಿಡವನ್ನು ಐದು ಔಷಧೀಯ ಸಸ್ಯಗಳಲ್ಲೊಂದಾಗಿ ಗುರುತಿಸಲಾಗಿದೆ. ಒಣಗಿಸಿದ ಎಲೆಗಳನ್ನು ಆಯುರ್ವೇದದ ಔಷಧಿಯಾಗಿ ಬಳಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ’ ಎಂದು ಡಾ.ಎನ್‌.ಶ್ರೀಕಾಂತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.