ADVERTISEMENT

ಹಿಂದೂಸ್ತಾನಿ ಗಾಯಕ ಉಸ್ತಾದ್‌ ಗುಲಾಂ ಮುಸ್ತಫಾಖಾನ್‌ ನಿಧನ

ಪಿಟಿಐ
Published 17 ಜನವರಿ 2021, 14:08 IST
Last Updated 17 ಜನವರಿ 2021, 14:08 IST
2018ರಲ್ಲಿ ಉಸ್ತಾದ್‌ ಗುಲಾಂ ಮುಸ್ತಫಾಖಾನ್‌ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು (ಸಂಗ್ರಹ ಚಿತ್ರ) –ಪಿಟಿಐ ಚಿತ್ರ
2018ರಲ್ಲಿ ಉಸ್ತಾದ್‌ ಗುಲಾಂ ಮುಸ್ತಫಾಖಾನ್‌ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು (ಸಂಗ್ರಹ ಚಿತ್ರ) –ಪಿಟಿಐ ಚಿತ್ರ   

ಮುಂಬೈ: ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ್‌ ಗುಲಾಂ ಮುಸ್ತಫಾಖಾನ್‌ (89) ಇಲ್ಲಿನ ಬಾಂದ್ರದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ನಿಧನರಾದರು.

‘ಬೆಳಿಗ್ಗೆ ನನ್ನ ಮಾವನವರು ಚೆನ್ನಾಗಿಯೇ ಇದ್ದರು. ಮಸಾಜ್‌ ಮಾಡುವ ವೇಳೆ ಅವರು ವಾಂತಿ ಮಾಡಿಕೊಂಡರು. ನಿಧಾನವಾಗಿ ಕಣ್ಣುಗಳನ್ನು ಮುಚ್ಚಿದರು. ಉಸಿರಾಟವೂ ನಿಧಾನಗೊಂಡಿತು. ಕೂಡಲೇ ನಾನು ವೈದ್ಯರನ್ನು ಕರೆಸಿದೆ. ವೈದ್ಯರು ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದರು’ ಎಂದು ಉಸ್ತಾದ್‌ ಗುಲಾಂ ಮುಸ್ತಫಾಖಾನ್‌ ಅವರ ಸೊಸೆ ನಮ್ರತಾ ಗುಪ್ತಾ ಖಾನ್‌ ತಿಳಿಸಿದರು.

ಗುಲಾಂ ಮುಸ್ತಫಾಖಾನ್‌ ಅವರು ಉತ್ತರ ಪ್ರದೇಶದ ಬದಾಯುಂನಲ್ಲಿ 1931ರ ಮಾರ್ಚ್‌ 3ರಂದು ಜನಿಸಿದರು. ಅವರದು ಸಂಗೀತಗಾರರ ಕುಟುಂಬ. ತಂದೆ ಉಸ್ತಾದ್‌ ವಾರಿಸ್‌ ಹುಸೇನ್‌ ಖಾನ್‌, ತಾಯಿ ಸಬ್ರಿ ಬೇಗಂ.

ADVERTISEMENT

ಹಿಂದೂಸ್ತಾನಿ ಸಂಗೀತದಲ್ಲಿ ಅವರು ಪ್ರಾಥಮಿಕ ಶಿಕ್ಷಣವನ್ನು ತಂದೆಯವರಲ್ಲಿ ಪಡೆದರೆ, ನಂತರ ಸಹೋದರ ಸಂಬಂಧಿ ಉಸ್ತಾದ್‌ ನಿಸಾರ್‌ ಹುಸೇನ್‌ ಖಾನ್‌ ಅವರಲ್ಲಿ ಮುಂದುವರಿಸಿದರು.

ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಅವರಿಗೆ ಪದ್ಮಶ್ರೀ (1991), ಪದ್ಮಭೂಷಣ (2006) ಹಾಗೂ ಪದ್ಮವಿಭೂಷಣ (2018) ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. 2003ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ.

ಸಾಂತಾಕ್ರೂಜ್‌ನಲ್ಲಿರುವ ಕಬರಸ್ತಾನದಲ್ಲಿ ಅಂತ್ಯಕ್ರಿಯೆ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.