ADVERTISEMENT

ಗಂಡಿನ ಮದುವೆ ವಯಸ್ಸು 18ಕ್ಕಿಳಿಸಿ: ಕಾನೂನು ಆಯೋಗ ಶಿಫಾರಸು

ಪಿಟಿಐ
Published 31 ಆಗಸ್ಟ್ 2018, 16:16 IST
Last Updated 31 ಆಗಸ್ಟ್ 2018, 16:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಗಂಡು ಮತ್ತು ಹೆಣ್ಣಿಗೆ ಮದುವೆಯ ಕನಿಷ್ಠ ವಯಸ್ಸಿನ ವಿಚಾರದಲ್ಲಿ ಯಾವುದೇ ತಾರತಮ್ಯ ಇರಬಾರದು. ಗಂಡಿಗೆ ಮದುವೆಯ ಕನಿಷ್ಠ ವಯಸ್ಸನ್ನು ಈಗಿನ 21 ವರ್ಷದಿಂದ 18ಕ್ಕೆ ಇಳಿಸಬೇಕು ಎಂದು ಕಾನೂನು ಆಯೋಗ ಶಿಫಾರಸು ಮಾಡಿದೆ.

ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಪೂರ್ಣ ಪ್ರಮಾಣದ ವರದಿಯನ್ನು ಸಿದ್ಧಪಡಿಸುವ ಬದಲು ಕಾನೂನು ಆಯೋಗವು ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿದೆ. ‘ಕಲಹರಹಿತ’ ವಿಚ್ಛೇದನ, ಜೀವನಾಂಶ, ಮದುವೆಗೆ ಒಪ್ಪಿಗೆ ಕೊಡುವ ವಯಸ್ಸಿಗೆ ಸಂಬಂಧಿಸಿದ ಅಸಮಾನತೆಯಂತಹ ವಿಚಾರಗಳನ್ನು ಈ ಸಮಾಲೋಚನಾ ಪತ್ರವು ಚರ್ಚೆಗೆ ಎತ್ತಿಕೊಂಡಿದೆ.

‘ಪ್ರಬುದ್ಧತೆಗೆ ಸಾರ್ವತ್ರಿಕವಾಗಿ ಒಂದು ವಯಸ್ಸನ್ನು ಗುರುತಿಸಲಾಗುತ್ತಿದೆ. ಈ ವಯಸ್ಸಿನ ಜನರಿಗೆ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಇದೆ. ಹಾಗಾಗಿ ಈ ವಯಸ್ಸಿನಲ್ಲಿ ಅವರಿಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನೂ ನೀಡಬೇಕು’ ಆಯೋಗವು ಶಿಫಾರಸು ಮಾಡಿದೆ.

ADVERTISEMENT

1875ರ ಭಾರತೀಯ ಪ್ರಬುದ್ಧತೆ ಕಾಯ್ದೆಯಲ್ಲಿ ಹೇಳಿದಂತೆ, ಹೆಣ್ಣು ಮತ್ತು ಗಂಡಿಗೆ ಮದುವೆಗೆ ಅರ್ಹತೆಯ ಕನಿಷ್ಠ ವಯಸ್ಸು 18 ವರ್ಷ ಎಂದು ಗುರುತಿಸಬೇಕು ಎಂದು ಆಯೋಗ ಹೇಳಿದೆ.

ಗಂಡ ಮತ್ತು ಹೆಂಡತಿಯ ನಡುವಣ ವಯಸ್ಸಿನಲ್ಲಿ ವ್ಯತ್ಯಾಸ ಇರಬೇಕು ಎಂಬ ಯೋಚನೆಗೆ ಕಾನೂನಿನಲ್ಲಿ ಯಾವ ಜಾಗವೂ ಇಲ್ಲ. ಇಲ್ಲಿ ಎಲ್ಲರೂ ಸಮಾನರು ಮತ್ತು ವಿವಾಹ ಸಂಬಂಧದಲ್ಲಿ ಗಂಡು ಮತ್ತು ಹೆಣ್ಣು ಸಮಾನವಾಗಿರಬೇಕು ಎಂದು ಸಮಾಲೋಚನಾ ಪತ್ರದಲ್ಲಿ ಹೇಳಲಾಗಿದೆ.

ಹೆಂಡತಿಯ ವಯಸ್ಸು ಗಂಡನ ವಯಸ್ಸಿಗಿಂತ ಕಡಿಮೆ ಇರಬೇಕು ಎಂಬ ಸಿದ್ಧಮಾದರಿ ಇದೆ. ಹೆಣ್ಣಿಗೆ 18 ವರ್ಷ ಮತ್ತು ಗಂಡಿಗೆ 21 ವರ್ಷ ಮದುವೆಯ ಕನಿಷ್ಠ ವಯಸ್ಸು ಎಂಬ ನಿಯಮವು ಈ ಸಿದ್ಧಮಾದರಿಗೆ ಪೂರಕವಾಗಿಯೇ ಕೆಲಸ ಮಾಡುತ್ತದೆ ಎಂದು ಆಯೋಗ ಹೇಳಿದೆ.

ಏಕರೂಪ ನಾಗರಿಕ ಸಂಹಿತೆ ಅನಗತ್ಯ
ಈ ಹಂತದಲ್ಲಿ ಏಕರೂಪ ನಾಗರಿಕ ಸಂಹಿತೆಯು ಅಪೇಕ್ಷಣೀಯವೂ ಅಲ್ಲ, ಅಗತ್ಯವೂ ಇಲ್ಲ ಎಂದು ಆಯೋಗ ಸ್ಪಷ್ಟವಾಗಿ ಹೇಳಿದೆ.

ಕಾನೂನು ಆಯೋಗದ ಅವಧಿಯು ಶುಕ್ರವಾರಕ್ಕೆ ಕೊನೆಗೊಂಡಿದೆ. ಪೂರ್ಣ ಪ್ರಮಾಣದ ವರದಿಗೆ ಸಮಯ ದೊರೆಯದ ಕಾರಣ ಆಯೋಗವು ಸಮಾಲೋಚನಾ ಪತ್ರವನ್ನು ಸಿದ್ಧಪಡಿಸಿದೆ. ಹಾಗಾಗಿ ಮುಂದಿನ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ವರದಿ ಸಿದ್ಧಪಡಿಸಬೇಕಿದೆ.

ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿ ಪೂರ್ಣ ಪ್ರಮಾಣದ ವರದಿಯ ಬದಲಿಗೆ ವೈಯಕ್ತಿಕ ಕಾನೂನುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾತ್ರ ಶಿಫಾರಸು ಮಾಡಲಾಗುವುದು ಎಂದು ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಬಿ.ಎಸ್‌. ಚೌಹಾಣ್‌ ಹಿಂದೆಯೇ ಹೇಳಿದ್ದರು.

ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿ ಪರಿಶೀಲನೆ ನಡೆಸುವಂತೆ ಆಯೋಗಕ್ಕೆ 2016ರ ಜೂನ್‌ 17ರಂದು ಕೇಂದ್ರ ಸರ್ಕಾರ ಸೂಚಿಸಿತ್ತು. ಇದು ದೇಶದಾದ್ಯಂತ ಭಾರಿ ಚರ್ಚೆಗೆ ಅವಕಾಶ ಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.