ಭದ್ರತಾ ಪಡೆ
(ಪಿಟಿಐ ಚಿತ್ರ)
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಿಷೇಧಿತ ಉಗ್ರ ಸಂಘಟನೆ ಲಷ್ಕರ್– ಎ– ತಯಬಾದ (ಎಲ್‌ಇಟಿ) ಇಬ್ಬರು ಹೈಬ್ರಿಡ್ ಉಗ್ರರನ್ನು ಸೆರೆಹಿಡಿದಿದ್ದಾರೆ.
ಇದು ಪ್ರಮುಖ ಕಾರ್ಯಾಚರಣೆಯ ಯಶಸ್ಸು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಹೈಬ್ರಿಡ್ ಉಗ್ರರು ಎಂದರೆ ಸಾಮಾನ್ಯ ನಾಗರಿಕರಂತೆ ಜನರ ನಡುವೆ ಇರುವ ಭಯೋತ್ಪಾದಕರು.
ಭದ್ರತಾ ಪಡೆ ಅಧಿಕಾರಿಗಳು ಬುಧವಾರ ರಾತ್ರಿ ಪೂಂಚ್‌ನ ಕೆಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಅರಂಭಿಸಿದ್ದರು. ಉಗ್ರರ ಚಲನವಲನ ಇರುವ ಶಂಕೆಯಿಂದಾಗಿ ಹಣ್ಣಿನ ತೋಟವೊಂದರ ಪ್ರದೇಶವನ್ನು ಸುತ್ತುವರೆಯಲಾಗಿತ್ತು. ಎನ್‌ಕೌಂಟರ್ ಮಾಡಲು ಯೋಜಿಸುತ್ತಿದ್ದಾಗಲೇ ಇಬ್ಬರು ಉಗ್ರರು ಶರಣಾಗಿದ್ದಾರೆ. ಅವರನ್ನು ಇರ್ಫಾನ್ ಬಶೀರ್ ಮತ್ತು ಉಜೈರ್ ಸಲಾಮ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ ಎಕೆ–56 ರೈಫಲ್ಸ್, ನಾಲ್ಕು ಮ್ಯಾಗಜಿನ್‌ಗಳು, 102 ಸುತ್ತು ಗುಂಡುಗಳು, ಎರಡು ಹ್ಯಾಂಡ್ ಗ್ರೆನೇಡ್‌ಗಳು, ₹5,400 ನಗದು, ಮೊಬೈಲ್, ಸ್ಮಾರ್ಟ್ ವಾಚ್, ಆಧಾರ್ ಕಾರ್ಡ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದೂ ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.