ADVERTISEMENT

ಲೆಫ್ಟಿನೆಂಟ್‌ ಗವರ್ನರ್‌ ನಮ್ಮ ಹೆಡ್‌ ಮಾಸ್ಟರ್‌ ಅಲ್ಲ: ಅರವಿಂದ್‌ ಕೇಜ್ರಿವಾಲ್

ಪಿಟಿಐ
Published 16 ಜನವರಿ 2023, 20:14 IST
Last Updated 16 ಜನವರಿ 2023, 20:14 IST
ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದಲ್ಲಿ ಎಎಪಿ ಸಚಿವರು ಹಾಗೂ ಶಾಸಕರು ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಗೆ ‍ಪಾದಯಾತ್ರೆ ನಡೆಸಿದರು –ಪಿಟಿಐ ಚಿತ್ರ 
ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದಲ್ಲಿ ಎಎಪಿ ಸಚಿವರು ಹಾಗೂ ಶಾಸಕರು ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಗೆ ‍ಪಾದಯಾತ್ರೆ ನಡೆಸಿದರು –ಪಿಟಿಐ ಚಿತ್ರ    

ನವದೆಹಲಿ: ‘ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ನಮ್ಮ ಮುಖ್ಯೋಪಾಧ್ಯಾಯರಲ್ಲ. ಅವರು ‘ಹೆಡ್‌ ಮಾಸ್ಟರ್‌’ ರೀತಿ ವರ್ತಿಸಬಾರದು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೋಮವಾರ ಕಿಡಿಕಾರಿದ್ದಾರೆ.

ದೆಹಲಿ ಸರ್ಕಾರವು ಶಾಲಾ ಶಿಕ್ಷಕರನ್ನು ತರಬೇತಿಗಾಗಿ ಫಿನ್ಲೆಂಡ್‌ಗೆ ಕಳುಹಿಸಲು ನಿರ್ಧರಿಸಿತ್ತು. ಈ ಪ್ರಸ್ತಾವನೆಯನ್ನು ಸಕ್ಸೇನಾ ಅವರು ತಿರಸ್ಕರಿಸಿದ್ದರು. ಅವರ ಈ ನಿರ್ಧಾರವನ್ನು ಖಂಡಿಸಿ ದೆಹಲಿ ಸರ್ಕಾರದ ಸಚಿವರು ಹಾಗೂ ಶಾಸಕರು ಕೇಜ್ರಿವಾಲ್‌ ನೇತೃತ್ವದಲ್ಲಿ ಸೋಮವಾರ ವಿಧಾನಸಭೆಯಿಂದ ಲೆಫ್ಟಿನೆಂಟ್‌ ಗವರ್ನರ್ ಕಚೇರಿವರೆಗೂ ಪಾದಯಾತ್ರೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಕೇಜ್ರಿವಾಲ್‌, ‘ದೆಹಲಿಯು ಸರ್ವಾಧಿಕಾರಿ ಧೋರಣೆ ಸಹಿಸುವುದಿಲ್ಲ. ಯಾರೇ ಅಡ್ಡಿಪಡಿಸಿದರೂ ಶಿಕ್ಷಕರನ್ನು ಫಿನ್ಲೆಂಡ್‌ಗೆ ಕಳುಹಿಸುವ ನಿರ್ಧಾರದಿಂದ ನಮ್ಮ ಸರ್ಕಾರ ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಆಡಳಿತಾರೂಢ ಎಎಪಿ ಸರ್ಕಾರದ ಶಾಸಕರು ಸೋಮವಾರ ವಿಧಾನಸಭೆಯಲ್ಲೂ ಗದ್ದಲ ನಡೆಸಿದ್ದಾರೆ. ಹೀಗಾಗಿ ದಿನದ ಕಲಾಪವನ್ನು ಮುಂದೂಡಲಾಗಿದೆ. ‘ಲೆಫ್ಟಿನೆಂಟ್‌ ಗವರ್ನರ್‌ ಸಾಹೇಬರೆ ಶಿಕ್ಷಕರನ್ನು ಫಿನ್ಲೆಂಡ್‌ಗೆ ಹೋಗಲು ಬಿಡಿ’ ಎಂಬ ಫಲಕಗಳನ್ನು ಹಿಡಿದಿದ್ದ ಶಾಸಕರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸಕ್ಸೇನಾ ವಿರುದ್ಧ ಘೋಷಣೆಗಳನ್ನೂ ಕೂಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.