ADVERTISEMENT

ಯೋಧನ ಕುಟುಂಬಕ್ಕೆ 48 ತಾಸಿನಲ್ಲಿ ವಿಮೆ ಪಾವತಿಸಿದ ಎಲ್‌ಐಸಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 13:11 IST
Last Updated 17 ಫೆಬ್ರುವರಿ 2019, 13:11 IST

ಹೈದರಾಬಾದ್‌: ಪುಲ್ವಾಮಾದಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಎಚ್‌.ಗುರು ಅವರ ಕುಟುಂಬಕ್ಕೆ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) 48 ತಾಸುಗಳೊಳಗೆ ವಿಮಾ ಪರಿಹಾರ ಮೊತ್ತವನ್ನು ತಲುಪಿಸಿ, ಸಂತ್ರಸ್ತ ಕುಟುಂಬಕ್ಕೆ ಕ್ಷಿಪ್ರಗತಿಯಲ್ಲಿ ಸ್ಪಂದಿಸಿದೆ.

ಯಾವುದೇ ದಾಖಲೆ, ಮರಣ ಪ್ರಮಾಣ ಪತ್ರ ನಿರೀಕ್ಷಿಸದೆ ನಾಮಿನಿಯ ಖಾತೆಗೆ ಯೋಧನ ಮೂರು ಪಾಲಿಸಿಗಳ ಪರಿಹಾರ ಮೊತ್ತವನ್ನು ಎಲ್‌ಐಸಿ ಮಂಡ್ಯ ಶಾಖೆಯಿಂದ ಪಾವತಿಸಲಾಗಿದೆ.

ಎಲ್‌ಐಸಿ ಅಧಿಕಾರಿಗಳು ಪರಿಹಾರದ ಚೆಕ್‌ ಅನ್ನು ಮೃತ ಯೋಧನ ತಂದೆ ಹೊನ್ನಯ್ಯ ಮತ್ತು ಅವರ ತಾಯಿ ಚಿಕ್ಕತಾಯಮ್ಮ ಅವರಿಗೆ ಯೋಧನ ಹುಟ್ಟೂರು ಮದ್ದೂರು ತಾಲ್ಲೂಕಿನ ಗುಡಿಗೆರೆ ಕಾಲೊನಿಯಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸಮ್ಮುಖದಲ್ಲಿ ಹಸ್ತಾಂತರಿಸಿದರು.

ADVERTISEMENT

ಮರಣ ಪರಿಹಾರವನ್ನು ತ್ವರಿತಗತಿಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ತಲುಪಿಸುವುದು ಎಲ್‌ಐಸಿಗೆ ಹುಟ್ಟುಗುಣವಾಗಿ ಬಂದಿದೆ. ಬರೀ ಎರಡು ದಿನಗಳೊಳಗೆ ಪರಿಹಾರ ತಲುಪಿಸುವ ಮೂಲಕ ಎಲ್‌ಐಸಿ ಗ್ರಾಹಕ ಹಿತಾಸಕ್ತಿ ಕೇಂದ್ರಿತ ವಿಮಾ ಸಂಸ್ಥೆ ಎನ್ನುವುದು ಪ್ರತಿಬಿಂಬಿತವಾಗಿದೆ. ಕರೀಂನಗರ ಬಸ್‌ ಅಪಘಾತ, ಮೈಸೂರು ಬಸ್‌ ಅಪಘಾತ ಮತ್ತು ಮೈಸೂರು ದೇವಸ್ಥಾನ ದುರಂತದ ಘಟನೆಗಳಲ್ಲೂ ಇದೇ ರೀತಿ ಎರಡು ದಿನಗಳೊಳಗೆ ಪರಿಹಾರ ತಲುಪಿಸಲಾಗಿತ್ತು ಎಂದು ಎಲ್‌ಐಸಿ ವಲಯ ವ್ಯವಸ್ಥಾಪಕ ಟಿ.ಸಿ.ಸುಶೀಲ್‌ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.