ADVERTISEMENT

ಕೊರೊನಾ ಕತ್ತಲೆ: ಬೆಳಗಿದ ಭಾರತ

ದೇಶದೆಲ್ಲೆಡೆ ಮೊಳಗಿದ ಶಂಖ, ಜಾಗಟೆ ಸದ್ದು l ದೇಶದಲ್ಲಿ ಇನ್ನೂ 514 ಮಂದಿಗೆ ಸೋಂಕು

ಪಿಟಿಐ
Published 5 ಏಪ್ರಿಲ್ 2020, 21:59 IST
Last Updated 5 ಏಪ್ರಿಲ್ 2020, 21:59 IST
ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನರು ಹಣತೆ ಬೆಳಗಿಸಿ ಭಾರತದ ನಕ್ಷೆ ಬಿಡಿಸಿದರು. ಪಿಟಿಐ ಚಿತ್ರ
ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನರು ಹಣತೆ ಬೆಳಗಿಸಿ ಭಾರತದ ನಕ್ಷೆ ಬಿಡಿಸಿದರು. ಪಿಟಿಐ ಚಿತ್ರ   
""
""

ನವದೆಹಲಿ: ರಾತ್ರಿ 9 ಗಂಟೆಗೆ ಸರಿಯಾಗಿ ಮನೆಯ ವಿದ್ಯುತ್‌ ದೀಪಗಳನ್ನು ಆರಿಸಿ, ಸತತ 9 ನಿಮಿಷಗಳವರೆಗೆ ಮನೆ ಮುಂದೆ, ಅಂಗಳ, ಬಾಲ್ಕನಿಯಲ್ಲಿ ಹಣತೆ, ಮೋಂಬತ್ತಿ ಹಾಗೂ ಮೊಬೈಲ್ ಫ್ಲ್ಯಾಷ್‌ಲೈಟ್‌ಗಳನ್ನು ಬೆಳಗುವ ಮೂಲಕ ದೇಶದ ಜನರು ಕೊರೊನಾ ವೈರಸ್‌ ವಿರುದ್ಧದ ಸಂಘಟಿತ ಹೋರಾಟಕ್ಕೆ ಭಾನುವಾರ ಬೆಂಬಲ ಸೂಚಿಸಿದರು.

ಹೆಚ್ಚಿನ ನಗರಗಳಲ್ಲಿ ನಿಗದಿತ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಜನರು ಮನೆಗಳ ದೀಪಗಳನ್ನು ಆರಿಸಿ ಹಣತೆ, ಮೋಂಬತ್ತಿ ಹಚ್ಚಿದರು. ಇದರ ಜತೆಯಲ್ಲೇ ಶಂಖ, ಜಾಗಟೆ, ಪಟಾಕಿಗಳ ಸದ್ದೂ ಕೇಳಿಸಿತು. ಕೆಲವು ಪ್ರದೇಶಗಳಲ್ಲಿ ಭಕ್ತಿಗೀತೆಗಳು, ಮಂತ್ರ ಘೋಷ, ರಾಷ್ಟ್ರಗೀತೆ ಮೊಳಗಿತು.

ರಾಜ್ಯದಲ್ಲಿ ಸ್ಪಂದನೆ: ರಾಜ್ಯದ ಜನರು ಸಹ ಅಭೂತಪೂರ್ವವಾಗಿ ಸ್ಪಂದಿಸಿದರು. ಕೆಲವರು ವೈದ್ಯರ ಪರವಾಗಿ ಘೋಷಣೆ ಕೂಗಿದರೆ, ಹಲವರು ಪ್ರಧಾನಿ ಮೋದಿಗೆ ಜೈಕಾರ ಹಾಕಿದರು.ಹಲವು ನಗರಗಳಲ್ಲಿ ರಾತ್ರಿ 9ಕ್ಕೆ ಸರಿಯಾಗಿ ಬೀದಿದೀಪಗಳನ್ನು ಆರಿಸಲಾಯಿತು. ಕೆಲವರು ಪಟಾಕಿ ಸಿಡಿಸಿಸಂಭ್ರಮಿಸಿದರು.

ADVERTISEMENT

ಮನೆ ಮಂದಿಯೆಲ್ಲ ಮೇಣದಬತ್ತಿ ಹಿಡಿದು, ದೇವರ ಮಂತ್ರ ಜಪಿಸುವ ಮೂಲಕ ದೇಶವು ಕೊರೊನಾ ಸೋಂಕಿನಿಂದ ಮುಕ್ತವಾಗಲಿ ಎಂದು ಪ್ರಾರ್ಥಿಸಿದರು.

ಮನೆಯ ವಿದ್ಯುತ್‌ ದೀಪಗಳನ್ನು ಆರಿಸಿ ಮೋಂಬತ್ತಿ, ಫ್ಲ್ಯಾಷ್‌ಲೈಟ್‌ಗಳನ್ನು ಬೆಳಗಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು.

ಗ್ರಿಡ್‌ಗಳಿಗೆ ಹಾನಿಯಾಗಿಲ್ಲ: ‘ಏಕಕಾಲಕ್ಕೆ ವಿದ್ಯುತ್‌ ದೀಪಗಳನ್ನು ಆರಿಸಿದರೆ ಗ್ರಿಡ್‌ಗಳಿಗೆ ಅಪಾಯವಾಗಬಹುದು ಎಂಬ ಭಯವನ್ನು ವಿದ್ಯುತ್‌ ವಿತರಣಾ ಸಂಸ್ಥೆಗಳು ವ್ಯಕ್ತಪಡಿಸಿದ್ದವು. ಭಾನುವಾರ ರಾತ್ರಿ ನಾಲ್ಕು ನಿಮಿಷಗಳಲ್ಲಿ ವಿದ್ಯುತ್‌ ಬಳಕೆಯ ಪ್ರಮಾಣವು 117 ಗಿಗಾ ವಾಟ್‌ನಿಂದ 85.30 ಗಿಗಾ ವಾಟ್‌ಗೆ ಇಳಿದಿತ್ತು. ಸಿಬ್ಬಂದಿಯು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಿದ ಕಾರಣ ಯಾವುದೇ ಅಪಾಯ ಸಂಭವಿಸಲಿಲ್ಲ’ ಎಂದು ಇಂಧನ ಸಚಿವ ಆರ್‌.ಕೆ. ಸಿಂಗ್‌ ತಿಳಿಸಿದರು.

ಇನ್ನೂ 514 ಮಂದಿಗೆ ಸೋಂಕು: ಈ ನಡುವೆ, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು 4,186ಕ್ಕೆ ಹಾಗೂ ಸಾವಿನ ಸಂಖ್ಯೆಯು 118ಕ್ಕೆ ಏರಿಕೆಯಾಗಿದೆ. ಭಾನುವಾರ ಹೊಸದಾಗಿ 514 ಮಂದಿ ಸೋಂಕಿತರಾಗಿದ್ದಾರೆ ಎಂದು ಕೇಂದ್ರದ ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.