ADVERTISEMENT

ಶುದ್ಧ ಪರಿಸರದಲ್ಲಿ ಸೋಂಕು ಪ್ರಸರಣ ಕಡಿಮೆ -ಕೇಂದ್ರ ಸರ್ಕಾರ

ಸೋಂಕು ತಡೆಯಿರಿ –ಪಿಡುಗು ಹತ್ತಿಕ್ಕಿ ಘೋಷಣೆಯಡಿ ಹೊಸ ಮಾರ್ಗಸೂಚಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಮೇ 2021, 15:33 IST
Last Updated 20 ಮೇ 2021, 15:33 IST
 ಪ್ರಾತಿನಿಧಿಕ ಚಿತ್ರ
 ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮಾಸ್ಕ್‌ ಧರಿಸುವುದು, ಅಂತರ ಕಾಪಾಡುವಿಕೆ ಜೊತೆಗೆ ಸ್ವಚ್ಛತೆಗೆ ಆದ್ಯತೆ ಹಾಗೂ ವಾತಾವರಣದಲ್ಲಿ ಶುದ್ಧ ಗಾಳಿ ಇರುವಂತೆ ನೋಡಿಕೊಳ್ಳುವುದು ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

‘ಸೋಂಕು ಪ್ರಸರಣ ತಡೆಯಿರಿ –ಪಿಡುಗು ಹತ್ತಿಕ್ಕಿ’ ಘೋಷಣೆಯಡಿ ಈ ಬಗ್ಗೆ ಹೊಸ ಮಾರ್ಗಸೂಚಿ ನಿಯಮಗಳನ್ನು ನೀಡಿದ್ದು, ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಈ ಸೂಚನೆಗಳನ್ನು ನೀಡಿದೆ. ಶುದ್ಧ ಗಾಳಿ, ವಾತಾವರಣ ಇದ್ದಲ್ಲಿ ಸೋಂಕು ಹರಡುವಿಕೆಯ ಅಪಾಯವೂ ಕಡಿಮೆ ಎಂದು ಹೇಳಿದೆ.

ವಾಸನೆಯಂತೆ ಸೋಂಕು ಕೂಡಾ ತೆರೆದ ವಾತಾವರಣದಲ್ಲಿ ಚದುರಲಿದ್ದು, ದುರ್ಬಲಗೊಳ್ಳಲಿದೆ. ಹೀಗಾಗಿ, ಶುದ್ಧ ಗಾಳಿ ಆವರಿಸುವಂತೆ ಕಿಟಕಿ, ಬಾಗಿಲು ತೆರೆದಿರುವುದು, ವೆಂಟಿಲೇಷನ್‌ ವ್ಯವಸ್ಥೆ ಇದ್ದಲ್ಲಿ ಸೋಂಕು ಒಂದೆಡೇ ಕ್ರೋಡಿಕರಣ ಆಗುವುದು ತಪ್ಪಲಿದೆ ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

ಕೆಲಸದ ಸ್ಥಳ, ಮನೆಗಳಲ್ಲಿ ಶುದ್ಧ ಗಾಳಿ ಇರುವುದು ಸಮುದಾಯವನ್ನು ರಕ್ಷಿಸಲಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈ ನಿಟ್ಟಿನಲ್ಲಿ ತುರ್ತು ಕ್ರಮ ಜರುಗಿಸಬೇಕು. ವ್ಯವಸ್ಥಿತ ದಿಕ್ಕಿನಲ್ಲಿ ಗಾಳಿ ಚಲಿಸುವಂತೆ ಫ್ಯಾನ್‌ ಬಳಕೆ,ಕಿಟಕಿ ಮತ್ತು ಬಾಗಿಲು ತೆರೆದಿರುವುದು, ಭಾಗಶಃ ಕಿಟಕಿ ತೆರೆದರೂ ಹೊರಗಿನ ಗಾಳಿ ಬರಲಿದ್ದು, ಒಳಗಿನ ಗಾಳಿಯ ಗುಣಮಟ್ಟ ಹೆಚ್ಚಲಿದೆ. ಒಳಗಿನ ಗಾಳಿ ಹೊರಹೋಗುವಂತ ವ್ಯವಸ್ಥೆ, ಎಕ್ಸಾಸ್ಟ್‌ ಫ್ಯಾನ್‌ಗಳ ಬಳಕೆಯು ಸೋಂಕು ತಡೆಗೆ ಅನುಕೂಲ ಎಂದು ಹೇಳಲಾಗಿದೆ.

ಸರಳ ಕ್ರಮ ಮತ್ತು ಕಾರ್ಯಶೈಲಿಯು ಸೋಂಕು ಪ್ರಸರಣವನ್ನು ತಡೆಯಲಿದೆ ಎಂದು ಒತ್ತು ಹೇಳಿದೆ. ಗಾಳಿಯ ಸರಾಗ ಚಲನೆಗೆ ಇರುವ ವಾತಾವರಣವಿದ್ದಲ್ಲಿ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಗಳು ಕಡಿಮೆ ಎಂದು ಪ್ರತಿಪಾದಿಸಿದೆ.

ಕೇಂದ್ರೀಕೃತ ವಾಯು ನಿರ್ವಹಣಾ ವ್ಯವಸ್ಥೆ, ವಾಯು ಶುದ್ಧೀಕರಣ ವ್ಯವಸ್ಥೆಯುಳ್ಳ ಕಟ್ಟಡಗಳು, ನಿಯಮಿತವಾಗಿ ಗಾಳಿ ಶುದ್ಧತೆಗೆ ಕ್ರಮವಹಿಸುವುದು ಅಗತ್ಯ. ಸಭಾಂಗಣಗಳು, ಕಚೇರಿ, ಶಾಪಿಂಗ್ ಮಾಲ್‌ಗಳಲ್ಲಿ ಎಕ್ಸಾಸ್ಟ್‌ ಫ್ಯಾನ್‌ಗಳ ಬಳಕೆ ಅಗತ್ಯ. ನಿಯಮಿತವಾಗಿ ಗಾಳಿ ಶುದ್ಧೀಕರಣ ಪರಿಕರಗಳ ನಿರ್ವಹಣೆಯೂ ಅಗತ್ಯ ಎಂದು ಸಲಹೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.