ಪ್ರಾತಿನಿಧಿಕ ಚಿತ್ರ
ಭೋಪಾಲ್: ಉಜ್ಜಯಿನಿ, ಓಂಕಾರೇಶ್ವರ, ಮಹೇಶ್ವರ ಮತ್ತು ಮೈಹಾರ್ ಸೇರಿದಂತೆ ಮಧ್ಯಪ್ರದೇಶದ 19 ಧಾರ್ಮಿಕ ಸ್ಥಳಗಳು ಮತ್ತು ಆಯ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಧಾರ್ಮಿಕ ಮಹತ್ವವುಳ್ಳ 19 ನಗರಗಲ್ಲಿ ಮದ್ಯ ಮಾರಾಟದ ಮೇಲಿನ ನಿಷೇಧ ಇಂದಿನಿಂದಲೇ(ಏ.1) ಜಾರಿಗೆ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕ್ರಮವನ್ನು 'ವ್ಯಸನ ಮುಕ್ತಿಯತ್ತ ಐತಿಹಾಸಿಕ ಹೆಜ್ಜೆ' ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಬಣ್ಣಿಸಿದ್ದಾರೆ.
ಉಜ್ಜಯಿನಿ, ಓಂಕಾರೇಶ್ವರ, ಮಹೇಶ್ವರ, ಮಂಡಲೇಶ್ವರ, ಓರ್ಚಾ, ಮೈಹಾರ್, ಚಿತ್ರಕೂಟ, ದಾಟಿಯಾ, ಪನ್ನಾ, ಮಂಡ್ಲಾ, ಮುಲ್ತೈ, ಮಂದಸೌರ್, ಅಮರಕಂಟಕ್ ನಗರ ವ್ಯಾಪ್ತಿಯ ಸಲ್ಕನ್‌ಪುರ , ಕುಂದಲ್‌ಪುರ, ಬಂದಕ್‌ಪುರ, ಬರ್ಮನ್‌ಕಲನ್, ಬರ್ಮನ್‌ಖುರ್ಡ್ ಮತ್ತು ಲಿಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಮದ್ಯದಂಗಡಿಗಳು ಮತ್ತು ಬಾರ್‌ಗಳನ್ನು ಮುಚ್ಚಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಮೋಹನ್ ಯಾದವ್, 'ರಾಜ್ಯವನ್ನು ವ್ಯಸನ ಮುಕ್ತಗೊಳಿಸಲು ಮತ್ತು ಸಾರ್ವಜನಿಕರ ನಂಬಿಕೆಗಳು, ಸಾಂಸ್ಕೃತಿಕ ಮೌಲ್ಯಗಳು ಹಾಗೂ ಧಾರ್ಮಿಕ ಪರಂಪರೆಯೊಂಗಿಗೆ ಆಡಳಿತವನ್ನು ಸಂಯೋಜಿಸುವ ಉಪಕ್ರಮದ ಭಾಗವಾಗಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಪೂಜಾ ಮತ್ತು ಯಾತ್ರಾ ಸ್ಥಳಗಳು ಮದ್ಯ ಮುಕ್ತ ವಲಯಗಳಾಗಬೇಕು. ಈ ನಿರ್ಧಾರದಿಂದ ಪವಿತ್ರ ಸ್ಥಳಗಳ ಬಗ್ಗೆ ಜನರು ಹೊಂದಿರುವ ನಂಬಿಕೆ ಮತ್ತು ಗೌರವವನ್ನು ಉಳಿಸಿಕೊಂಡಂತಾಗುತ್ತದೆ. ಇದು ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಾಡುವತ್ತ ಒಂದು ಹೆಜ್ಜೆಯಾಗಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.