ADVERTISEMENT

ಬಿಹಾರ ಲೋಕಸಭಾ ಕ್ಷೇತ್ರಗಳು: ಬಿಜೆಪಿ–ಜೆಡಿಯು ಸೀಟು ಹಂಚಿಕೆಗೆ ಮಿತ್ರಪಕ್ಷಗಳ ತಗಾದೆ

ಎನ್‌ಡಿಎಯಲ್ಲಿ ಬಿಕ್ಕಟ್ಟು

ಪಿಟಿಐ
Published 9 ನವೆಂಬರ್ 2018, 14:34 IST
Last Updated 9 ನವೆಂಬರ್ 2018, 14:34 IST
   

ಪಟ್ನಾ:‘ಬಿಹಾರದ ಲೋಕಸಭಾ ಕ್ಷೇತ್ರಗಳಲ್ಲಿ ಸೀಟು ಹಂಚಿಕೆ ಬಗ್ಗೆ ಬಿಜೆಪಿ ಮತ್ತು ಜೆಡಿಯುಗಳು ಮಾತ್ರ ಕೂತು ಮಾತುಕತೆ ನಡೆಸಿದರೆ ಅದಕ್ಕೆ ಮಾನ್ಯತೆ ಇಲ್ಲ’ ಎಂದು ಎನ್‌ಡಿಎ ಮಿತ್ರಪಕ್ಷಗಳಾದ ಎಲ್‌ಜೆಪಿ ಮತ್ತು ಆರ್‌ಎಲ್‌ಎಸ್‌ಪಿಗಳು ಎಚ್ಚರಿಕೆ ನೀಡಿವೆ.

2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಷ್ಟೇ ಕ್ಷೇತ್ರಗಳಲ್ಲಿ 2019ರ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸುತ್ತೇವೆ. ಅಷ್ಟೇ ಸೀಟುಗಳನ್ನು ನಮಗೆ ಬಿಟ್ಟುಕೊಡಬೇಕು ಎಂದು ಬಿಜೆಪಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಎರಡೂ ಪಕ್ಷಗಳ ಮುಖಂಡರು ಹೇಳಿಕೆ ನೀಡಿದ್ದಾರೆ.

ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ ಒಟ್ಟು 34 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಬಿಜೆಪಿ ಮತ್ತು ಜೆಡಿಯುಗಳು ಈಚೆಗೆ ಘೋಷಿಸಿದ್ದವು. ಉಳಿದ ಆರು ಕ್ಷೇತ್ರಗಳನ್ನು ಎಲ್‌ಜೆಪಿ ಮತ್ತು ಆರ್‌ಎಲ್‌ಎಸ್‌ಪಿಗಳಿಗೆ ಬಿಟ್ಟುಕೊಟ್ಟಿದ್ದವು.

ADVERTISEMENT

2014ರ ಚುನಾವಣೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ನಾಯಕತ್ವದ ಎಲ್‌ಜೆಪಿ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಆರರಲ್ಲಿ ಗೆದ್ದಿತ್ತು. ಉಪೇಂದ್ರ ಕುಶ್ವಾಹಾ ನಾಯಕತ್ವದ ಆರ್‌ಎಲ್‌ಎಸ್‌ಪಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಮೂರರಲ್ಲೂ ಜಯಗಳಿಸಿತ್ತು.

‘ಬಿಜೆಪಿ, ಜೆಡಿಯು, ಎಲ್‌ಜೆಪಿ ಮತ್ತುಆರ್‌ಎಲ್‌ಎಸ್‌ಪಿಯ ರಾಷ್ಟ್ರೀಯ ಅಧ್ಯಕ್ಷರು ಕೂತು ನಡೆಸುವ ಸಭೆಗಷ್ಟೇ ಮಾನ್ಯತೆ. ಅಂತಹ ಸಭೆ ಈವರೆಗೆ ನಡೆದಿಲ್ಲ. ಸೀಟು ಹಂಚಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಊಹಾಪೋಹ ಮಾತ್ರ. ಬಿಜೆಪಿ ಮತ್ತು ಜೆಡಿಯುಗಳು 50:50 ಸೀಟುಗಳನ್ನು ಹಂಚಿಕೊಂಡಿವೆ. 50:50 ಎಂಬುದು ಅವರೆಡೂ ಪಕ್ಷಗಳು ತಲಾ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಉಳಿದ 20ನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡುವುದೂ ಆಗಿರಬಹುದಲ್ಲ’ ಎಂದು ಎಲ್‌ಜೆಪಿ ಹೇಳಿದೆ.

‘ನಮ್ಮ ಜನಪ್ರಿಯತೆಯೇನೂ ಕುಗ್ಗಿಲ್ಲ. ಹೀಗಿದ್ದ ಮೇಲೆ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮೂರಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಕ್ಕೆ ನಮ್ಮ ಒಪ್ಪಿಗೆ ಇಲ್ಲವೇ ಇಲ್ಲ’ ಎಂದುಆರ್‌ಎಲ್‌ಎಸ್‌ಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.