ADVERTISEMENT

ಭಾರತದಿಂದ ನರ್ಸ್‌ಗಳನ್ನು ನೇಮಕ ಮಾಡಲು ಬ್ರಿಟನ್‌ ನಿರ್ಧಾರ

ಪಿಟಿಐ
Published 6 ಏಪ್ರಿಲ್ 2023, 14:05 IST
Last Updated 6 ಏಪ್ರಿಲ್ 2023, 14:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್‌: ಬ್ರಿಟನ್‌ನ ವೇಲ್ಸ್‌ನಲ್ಲಿಯ ಸ್ಥಳೀಯ ಆರೋಗ್ಯ ಸಂಸ್ಥೆಯೊಂದು ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು 400 ವಿದೇಶಿ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಅವರಲ್ಲಿ ಬಹುತೇಕರು ಕೇರಳ ಮೂಲದವರು ಆಗಿರಲಿದ್ದಾರೆ ಎನ್ನಲಾಗಿದೆ.

ವೇಲ್ಸ್‌ನಲ್ಲಿಯ ಸರ್ಕಾರಿ ಸ್ವಾಮ್ಯದ ಸ್ವಾನ್ಸೀ ಬೇ ವಿಶ್ವವಿದ್ಯಾಲಯ ಆರೋಗ್ಯ ಮಂಡಳಿಯು 2023–24ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 350 ವಿದೇಶಿ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲಿದೆ. ಇದಕ್ಕಾಗಿ 47.99 ಕೋಟಿ ವೆಚ್ಚ ತಗುಲಲಿದೆ ಎಂದು ಬಿಬಿಸಿಯ ಲೋಕಲ್‌ ಡೆಮಾಕ್ರೆಸಿ ರಿಪೋರ್ಟಿಂಗ್‌ ಸರ್ವೀಸ್‌ (ಎಲ್‌ಡಿಆರ್‌ಎಸ್‌) ವರದಿ ಮಾಡಿದೆ.

ಕೇರಳದಿಂದ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ವೆಸ್ಟ್‌ ಯಾರ್ಕ್‌ಶೈರ್‌ ಇಂಟಗ್ರೇಟೆಡ್‌ ಕೇರ್‌ ಸಿಸ್ಟಮ್‌ (ಡಬ್ಲ್ಯುವೈಐಸಿಎಸ್‌) ತಂಡವು ಕೇರಳದ ಸಚಿವರ ಜೊತೆ ಈಗಾಗಲೇ ಮಾತುಕತೆ ನಡೆಸಿದೆ ಎನ್ನಲಾಗಿದೆ.

ADVERTISEMENT

ಭಾರತವಲ್ಲದೇ ಫಿಲಿಪೀನ್ಸ್‌, ಆಫ್ರಿಕಾ ಮತ್ತು ಕೆರಿಬಿಯನ್‌ನಿಂದಲೂ ನರ್ಸ್‌ಗಳನ್ನು ನೇಮಕ ಮಾಡಲು ಆರೋಗ್ಯ ಮಂಡಳಿ ನಿರ್ಧರಿಸಿದೆ.

ವಿದೇಶಗಳಿಂದ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳುವುದರಿಂದ ‘ಪರಿಣಿತ ಸಿಬ್ಬಂದಿಗಳ ತ್ವರಿತ ನೇಮಕಾತಿಗೆ ಅನುಕೂಲವಾಗುತ್ತದೆ’ ಎಂದು ಸ್ವಾನ್ಸೀ ಬೇ ಆರೋಗ್ಯ ಮಂಡಳಿಯ ಅಧಿಕಾರಿ ಗಾರೆಥ್‌ ಹಾವೆಲ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಂಡ್‌ 5 ಒಪ್ಪಂದದ (ಇವರು ಹೊಸದಾಗಿ ನೇಮಕವಾಗುವ ನರ್ಸ್‌ಗಳು. ನೇಮಕಾತಿ ಬಳಿಕ ಅವರಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುವುದು) ಪ್ರಕಾರ ನರ್ಸ್‌ಗಳನ್ನು ನೇಮಕ ಮಾಡಲಾಗುವುದು. ಅವರಿಗೆ ಆರಂಭಿಕ ವೇತನವಾಗಿ ₹27.61 ಲಕ್ಷ (27,055 ಪೌಂಡ್ಸ್‌) ನೀಡಲಾಗುವುದು.

ಸ್ವಾನ್ಸೀ ಬೇ ಆರೋಗ್ಯ ಮಂಡಳಿಯಲ್ಲಿ ಸುಮಾರು 4,200 ನರ್ಸ್‌ಗಳು ಮತ್ತು ದಾದಿಯರ ಹುದ್ದೆಗಳಿಗೆ. 1,322 ಸಿಬ್ಬಂದಿಗಳು ಮುಂದಿನ ಕೆಲ ವರ್ಷಗಳಲ್ಲಿ ನಿವೃತ್ತರಾಗುವ ಕಾರಣ ದೊಡ್ಡ ಸಂಖ್ಯೆಯಲ್ಲಿ ನರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲು ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.