ADVERTISEMENT

ಸ್ಥಳೀಯ ವಿಚಾರಗಳಿಗೆ ಮಹತ್ವ ಹೆಚ್ಚು

ತಮಿಳುನಾಡು: ಹಿಂದಿ, ನೀಟ್‌ ‘ಹೇರಿಕೆ’ ಚುನಾವಣಾ ವಿಷಯ, ಮೈತ್ರಿಯ ಬಲವೇ ಗೆಲುವಿಗೆ ನಿರ್ಣಾಯಕ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 19:00 IST
Last Updated 28 ಮಾರ್ಚ್ 2019, 19:00 IST
   

ಚೆನ್ನೈ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ತೀವ್ರವಾದ ತ್ರಿಕೋನ ಸ್ಪರ್ಧೆ ಇದೆ. ಏಪ್ರಿಲ್‌ 18ರಂದು ಇಲ್ಲಿ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ ರಾಜ್ಯದ ಆಡಳಿತಾರೂಢ ಎಐಎಡಿಎಂಕೆ ಮತ್ತು ಕೇಂದ್ರದ ಬಿಜೆಪಿಯ ಆಡಳಿತದ ವಿರುದ್ಧದ ಅಲೆ ಇದೆ ಎಂದು ಹೇಳಲಾಗುತ್ತಿದೆ.

ನೋಟು ರದ್ದತಿ, ಜಿಎಸ್‌ಟಿ, ನೀಟ್‌, ಹಿಂದಿ ಮತ್ತು ಸಂಸ್ಕೃತ ‘ಹೇರಿಕೆ’ ಚುನಾವಣಾ ಪ್ರಚಾರದಲ್ಲಿ ಮುಖ್ಯವಾಗಿ ಪ್ರಸ್ತಾಪವಾಗುತ್ತಿವೆ. ಚೆನ್ನೈ ಮತ್ತು ಸೇಲಂ ನಡುವೆ ಎಂಟು ಪಥದ ಹೆದ್ದಾರಿ ನಿರ್ಮಾಣಕ್ಕೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಆದರೆ, ಸರ್ಕಾರ ಅದನ್ನು ಗಣನೆಗೇ ತೆಗೆದುಕೊಳ್ಳದೆ ಯೋಜನೆಯನ್ನು ಮುಂದುವರಿಸಿದೆ. ಈ ವಿಚಾರವೂ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಬಹುದು ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇಲ್ಲಿ ಮುಖ್ಯವಾದ ವಿಚಾರವೇ ಆಗಿದ್ದಾರೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಯಾವುದೇ ರಾಜಕೀಯ ಚರ್ಚೆ ಮೋದಿ ಅವರ ಸುತ್ತವೇ ಗಿರಕಿ ಹೊಡೆಯುತ್ತಿದೆ. 2018ರ ಏಪ್ರಿಲ್‌ ಬಳಿಕ ಮೋದಿ ಅವರು ತಮಿಳುನಾಡಿಗೆ ಬಂದಾಗಲೆಲ್ಲ ಎಲ್ಲೂ ಎದುರಿಸದಷ್ಟು ವಿರೋಧವನ್ನು ಅವರು ಎದುರಿಸಿದ್ದಾರೆ. ಬೀದಿಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿರೋಧ ಕಂಡು ಬಂದಿತ್ತು.

ADVERTISEMENT

ಎಐಎಡಿಎಂಕೆಯ ಜೆ.ಜಯಲಲಿತಾ ಮತ್ತು ಡಿಎಂಕೆಯ ಎಂ. ಕರುಣಾನಿಧಿ ಅವರು ನಿಧನರಾದ ಬಳಿಕ ಇಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದು. ಹಾಗಾಗಿ ಈ ಚುನಾವಣೆಯ ಬಗ್ಗೆ ಭಾರಿ ಕುತೂಹಲ ಮೂಡಿದೆ. ಆಡಳಿತಾರೂಢ ಎಐಎಡಿಎಂಕೆ ಮತ್ತು ಇತ್ತೀಚೆಗೆ ಭಾರಿ ಚೇತರಿಕೆ ಕಂಡಿರುವ ಡಿಎಂಕೆ ರಾಜ್ಯದ ಎರಡು ಮುಖ್ಯ ಪಕ್ಷಗಳು. ಸಣ್ಣ ಪಕ್ಷಗಳನ್ನು ಸೇರಿಸಿಕೊಂಡು ಎರಡೂ ಪಕ್ಷಗಳು ಪ್ರಬಲವಾದ ಮೈತ್ರಿಕೂಟವನ್ನು ಕಟ್ಟಿಕೊಂಡಿವೆ. ಎಐಎಡಿಎಂಕೆ ಜತೆಗೆ ಬಿಜೆಪಿ ಇದ್ದರೆ, ಡಿಎಂಕೆ ಜತೆಗೆ ಕಾಂಗ್ರೆಸ್‌ ಇದೆ. ಎಐಎಡಿಎಂಕೆಯ ಬಂಡಾಯ ನಾಯಕ ಟಿ.ಟಿ.ವಿ. ದಿನಕರನ್‌ ಅವರು ತಮಿಳುನಾಡು ಮತ್ತು ಪುದುಚೇರಿಯ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ.

ಚೆನ್ನೈ–ಸೇಲಂ ನಡುವಣ ಎಂಟು ಪಥದ ಹೆದ್ದಾರಿ ಐದು ಜಿಲ್ಲೆಗಳಲ್ಲಿ ಹಾದು ಹೋಗಲಿದೆ. ಭಾರಿ ಪ್ರಮಾಣದ ಕೃಷಿ ಜಮೀನು ಇದಕ್ಕಾಗಿ ಬಳಕೆಯಾಗಲಿದೆ. ಕಾಂಚೀಪುರಂ, ತಿರುವಣ್ಣಾಮಲೈ, ಧರ್ಮಪುರಿ, ಕೃಷ್ಣಗಿರಿ ಮತ್ತು ಸೇಲಂನ ರೈತರು ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದು ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಚೆನ್ನೈ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗಿದೆ. ಈ ಪ್ರದೇಶದಲ್ಲಿ ಒಟ್ಟು 17 ಲೋಕಸಭಾ ಕ್ಷೇತ್ರಗಳಿವೆ.

2016ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪಶ್ಚಿಮ ಭಾಗದ ಜಿಲ್ಲೆಗಳು ಎಐಎಡಿಎಂಕೆ ಅಧಿಕಾರ ಉಳಿಸಿಕೊಳ್ಳಲು ನೆರವಾಗಿದ್ದವು. ಆದರೆ, ಈಗ ಪೊಲ್ಲಾಚಿ ಲೈಂಗಿಕ ಕಿರುಕುಳ ಪ್ರಕರಣ ಚುನಾವಣಾ ಸಂದರ್ಭದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ರಾಜಕೀಯ ನಂಟು ಹೊಂದಿರುವ ಕೆಲವರು, ಹಲವು ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಚುನಾವಣೆಯ ಮೇಲೆ ಪರಿಣಾಮ ಬೀರದಿರುವ ಸಾಧ್ಯತೆ ಕಡಿಮೆ.

‘ಬಡತನ ನಿರ್ಮೂಲನೆ’ಗೆ ಸ್ಟಾಲಿನ್‌ ಬೆಂಬಲ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ಘೋಷಿಸಿದ ಕನಿಷ್ಠ ಆದಾಯ ಖಾತರಿ ಯೋಜನೆಯ ಪ್ರಸ್ತಾವಕ್ಕೆ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರು ಬೆಂಬಲ ನೀಡಿದ್ದಾರೆ. ಐದು ಕೋಟಿ ಕುಟುಂಬಗಳನ್ನು ಬಡತನದಿಂದ ಮೇಲೆತ್ತುವ ಈ ಯೋಜನೆಯ ಬಗ್ಗೆ ಮೋದಿ ಅವರು ಭೀತರಾಗಿದ್ದಾರೆ ಎಂದು ಸ್ಟಾಲಿನ್‌ ಆರೋಪಿಸಿದ್ದಾರೆ.

ಕಡು ಬಡ ಕುಟುಂಬಗಳಿಗೆ ತಿಂಗಳಿಗೆ ₹6 ಸಾವಿರ ನೆರವು ನೀಡುವ ಯೋಜನೆಯನ್ನು ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬಂದರೆ ಜಾರಿಗೆ ತರಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಕಮಲ್‌ ಪಕ್ಷದ ಪರಿಣಾಮವೇನು?

ನಟ ಕಮಲ್‌ ಹಾಸನ್‌ ಅವರು ಮಕ್ಕಳ ನೀದಿ ಮಯ್ಯಂ ಎಂಬ ಪಕ್ಷ ಕಟ್ಟಿದ್ದಾರೆ. ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನೂ ಘೋಷಣೆ ಮಾಡಿದ್ದಾರೆ. ಲೋಕಸಭೆ ಚುನಾವಣೆ ಜತೆಗೆ ತಮಿಳುನಾಡಿನಲ್ಲಿ ಖಾಲಿ ಇರುವ ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ. ಲೋಕಸಭೆ ಅಥವಾ ವಿಧಾನಸಭೆಗೆ ಈ ಬಾರಿ ಸ್ಪರ್ಧಿಸುವುದಿಲ್ಲ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನಿಸುತ್ತೇನೆ ಎಂದು ಕಮಲ್‌ ಹಾಸನ್‌ ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ನಟ ಕಮಲ್‌ ಅವರ ಪಕ್ಷದ ಸಾಧನೆ ಹೇಗಿರಬಹುದು ಎಂಬ ಕುತುಹೂಲ ಇದೆ.

ಪ್ರಮುಖ ವಿಚಾರಗಳು

* ಸ್ಟರ್ಲೈಟ್‌ ತಾಮ್ರ ಸಂಸ್ಕರಣ ಘಟಕದ ವಿರುದ್ಧ 2018ರಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ 13 ಮಂದಿ ಮೃತಪಟ್ಟಿದ್ದರು. ಇದರ ವಿರುದ್ಧ ಈಗಲೂ ಆಕ್ರೋಶ ಇದೆ

* ಒಖಿ ಚಂಡಮಾರುತ ಸಂತ್ರಸ್ತರಿಗೆ ನೀಡಲಾದ ಪರಿಹಾರ ಮತ್ತು ಕಲ್ಪಿಸಲಾದ ಪುನರ್ವಸತಿ ಸಮರ್ಪಕವಾಗಿರಲಿಲ್ಲ ಎಂಬ ಆರೋಪ ಇದೆ

* ‘ಹಸಿರು ಪಟಾಕಿ’ ಸಿಡಿಸಲು ಮಾತ್ರ ಅವಕಾಶ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ದಕ್ಷಿಣ ತಮಿಳುನಾಡಿನ ಲಕ್ಷಾಂತರ ಜನರು ಪಟಾಕಿ ಉದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ಅವರ ಬದುಕು ಅತಂತ್ರವಾಗಿದೆ. ಈ ಪ್ರದೇಶದಲ್ಲಿ 10 ಲೋಕಸಭಾ ಕ್ಷೇತ್ರಗಳಿವೆ

* ರಾಜ್ಯದ ಮಧ್ಯ ಭಾಗದಲ್ಲಿ ಗಾಜಾ ಚಂಡಮಾರುತ ಭಾರಿ ಅನಾಹುತ ಸೃಷ್ಟಿಸಿದೆ. ತೆಂಗಿನ ತೋಟಗಳಿಗೆ ಭಾರಿ ಹಾನಿ ಆಗಿದೆ

* ಕಾವೇರಿ ನೀರಿನ ವಿವಾದವೂ ಪ್ರಮುಖವಾಗಿ ಪ್ರಸ್ತಾಪ ಆಗುವ ಸಾಧ್ಯತೆ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.