ADVERTISEMENT

ಆಶಾಭಾವ ಮೂಡಿಸಿದ ಅಧ್ಯಯನ: ಲಾಕ್‌ಡೌನ್‌ನಿಂದ ಕೋವಿಡ್-19 ನಿಯಂತ್ರಣ

ಪಿಟಿಐ
Published 2 ಏಪ್ರಿಲ್ 2020, 14:13 IST
Last Updated 2 ಏಪ್ರಿಲ್ 2020, 14:13 IST
ಕೊರೊನಾ ವೈರಸ್‌ ಬಗ್ಗೆ ಬೆಂಗಳೂರಿನಲ್ಲಿ ಜಾಗೃತಿ ಮೂಡಿಸಿದ ಪೊಲೀಸರು
ಕೊರೊನಾ ವೈರಸ್‌ ಬಗ್ಗೆ ಬೆಂಗಳೂರಿನಲ್ಲಿ ಜಾಗೃತಿ ಮೂಡಿಸಿದ ಪೊಲೀಸರು   

ನವದೆಹಲಿ: ದೇಶದಲ್ಲಿ ಈಗ ವಿಧಿಸಿರುವ 21 ದಿನಗಳ ಲಾಕ್‌ಡೌನ್‌ನಿಂದ ಕೋವಿಡ್-19 ರೋಗ ಹಬ್ಬುವ ವೇಗದ ಪ್ರಮಾಣ ಶೇ 83ರಷ್ಟು ಕಡಿಮೆಯಾಗಲಿದೆ ಎಂದಿರುವ ಅಧ್ಯಯನವೊಂದು ಆಶಾಭಾವ ಹುಟ್ಟುಹಾಕಿದೆ. ಲಾಕ್‌ಡೌನ್ ಘೋ‍ಷಣೆಯಾದ 20ನೇ ದಿನಕ್ಕೆ ಅದರ ಫಲಿತಾಂಶಗಳು ಸ್ಪಷ್ಟವಾಗಿ ಗೋಚರಿಸಬಹುದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಪ್ರದೇಶದ ಶಿವ್ ನಾಡಾರ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಈ ಸಂಶೋಧನೆಯಲ್ಲಿ ಆಶಾದಾಯಕ ಫಲಿತಾಂಶ ಸಿಕ್ಕಿದೆ. ರೋಗಲಕ್ಷಣಗಳು ಕಂಡುಬಂದ ತಕ್ಷಣ ಅಂಥವರನ್ನು ಪ್ರತ್ಯೇಕಗೊಳಿಸಿ, ಚಿಕಿತ್ಸೆ ಮುಂದುವರಿಸುವುದು ಸಮಾಜಕ್ಕೆ ಒಳಿತು ಎಂದು ಸಂಶೋಧಕರು ಹೇಳಿದ್ದಾರೆ.

ದೇಶದ ಶೇ 80ರಿಂದ 90ರಷ್ಟು ಜನರುಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ ಎಂದುಕೊಂಡು ಈ ಸಂಶೋಧನೆಗಾಗಿ ಲೆಕ್ಕಾಚಾರ ಮಾಡಿದೆವು ಎಂದು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸಮಿತ್ ಭಟ್ಟಾಚಾರ್ಯ ಹೇಳಿದರು.

ADVERTISEMENT

ದೇಶದ ವಿವಿಧೆಡೆ ಗುರುವಾರ ಒಟ್ಟು 1,965 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದವು. ಸತ್ತವರ ಸಂಖ್ಯೆ 50. 'ಲಾಕ್‌ಡೌನ್ ಘೋಷಣೆಯಾದ 20ನೇ ದಿನದಿಂದ ಸೋಂಕಿತರ ಸಂಖ್ಯೆ ಈಗಿರುವುದಕ್ಕಿಂತಶೇ 83ರಷ್ಟು ಕಡಿಮೆಯಾಗಲಿದೆ. ಸೋಂಕು ಹರಡುವುದೂ ನಿಯಂತ್ರಣಕ್ಕೆ ಬರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸೋಂಕು ಹರಡುವ ಪ್ರಮಾಣ ನಿಯಂತ್ರಣಕ್ಕೆ ಬಂದರೆ ಲಭ್ಯ ವೈದ್ಯಕೀಯ ಸೌಲಭ್ಯಗಳನ್ನೇ ಸಮರ್ಪಕವಾಗಿ ಬಳಸಿಕೊಂಡು ಜನರನ್ನು ಉಳಿಸಿಕೊಳ್ಳಬಹುದಾಗಿದೆ. ಆರೋಗ್ಯ ರಕ್ಷಣಾ ವ್ಯವಸ್ಥೆ ಮೇಲಿರುವ ಹೊರೆಯೂ ಇದರಿಂದ ಕಡಿಮೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಲಾಕ್‌ಡೌನ್ ವಿಧಿಸಿದಾಗ ಕೋವಿಡ್-19 ಹರಡುವ ಪ್ರಮಾಣ 2ನೇ ಹಂತದಲ್ಲಿತ್ತು. ವಿದೇಶಗಳಿಗೆ ಹೋಗಿ ಬಂದವರ ಆಪ್ತ ಒಡನಾಡಿಗಳಲ್ಲಿ ಮಾತ್ರ ಸೋಂಕು ಹರಡುತ್ತಿತ್ತು. ಭಾರತದಲ್ಲಿ ಕೊರೊನಾ ಸೋಂಕು ಸಮುದಾಯಗಳಿಗೆ ಹರಡುವ 3ನೇ ಹಂತಕ್ಕೆ ತಲುಪಿರುವ ಬಗ್ಗೆ ಈವರೆಗೆ ಯಾವುದೇ ಗಟ್ಟಿ ಪುರಾವೆಗಳು ಸಿಕ್ಕಿಲ್ಲ.

ಆದರೂ ಕೆಲ ವಿಜ್ಞಾನಿಗಳು ದೇಶದಲ್ಲಿ ಕೊರೊನಾ ಸೋಂಕು 3ನೇ ಹಂತಕ್ಕೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಕೆಲ ಸೋಂಕಿತರು ತಮಗೆ ಅರಿವಿಲ್ಲದೆ ಹತ್ತಾರು ಮಂದಿಗೆ ಸೋಂಕು ಹರಡಬಹುದು ಎಂದು ಅಭಿಪ್ರಾಯಪಟ್ಟಿದ್ದರು.

ಭಾರತದಲ್ಲಿ ಪ್ರತಿ ಚದರ ಕಿ.ಮೀ.ಗೆ 412 ಮಂದಿ ವಾಸಿಸುತ್ತಿದ್ದಾರೆ. ಪ್ರತಿ ಕುಟುಂಬವು ಸರಾಸರಿ 4.5ರಿಂದ 5 ಮಂದಿಯನ್ನು ಹೊಂದಿದೆ. ಈ ಪೈಕಿ ಒಬ್ಬರ ವಯಸ್ಸು 60 ವರ್ಷ ದಾಟಿದೆ. ಹೀಗಾಗಿ ದೇಶದಲ್ಲಿ ಲಾಕ್‌ಡೌನ್ ವಿಧಿಸದಿದ್ದರೆ ಸೋಂಕು ಹರಡುವ ಪ್ರಮಾಣ ಹೆಚ್ಚಾಗುತ್ತಿತ್ತು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಲಾಕ್‌ಡೌನ್ ಯಶಸ್ವಿಯಾಗದಿದ್ದರೆ ದೊಡ್ಡ ಅನಾಹುತವೇ ಸಂಭವಿಸಲಿದೆ. ಮುಂದಿನ 10 ದಿನಗಳಲ್ಲಿ 5000 ಮತ್ತು 20 ದಿನಗಳಲ್ಲಿ30,790 ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ. ಈ ಪ್ರಕರಣಗಳು ಇದೇ ವೇಗದಲ್ಲಿ ಮುಂದುವರಿದರೆ ಸೋಂಕಿತರ ಸಂಖ್ಯೆ 2.70 ಲಕ್ಷ ದಾಟಲಿದೆ. 40ನೇ ದಿನದ ಹೊತ್ತಿಗೆ 5,407 ಸಾವು ಸಂಭವಿಸುವ ಅಪಾಯ ಇತ್ತು ಎಂದು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನಾಗ ಸುರೇಶ್ ವೀರಪು ವಿಶ್ಲೇಷಿಸಿದರು.

ಲಾಕ್‌ಡೌನ್ ಅವಧಿ ಅಂತ್ಯಗೊಂಡರೂ ಮುಂದಿನ ಎರಡು ಮೂರು ತಿಂಗಳು ನಾವು ಹುಷಾರಾಗಿರಬೇಕು. ಸೋಂಕು ಹರಡಲು ಒಂದುಸಣ್ಣ ಅವಕಾಶ ಸಿಕ್ಕರೂ ಅನಾಹುತವೇ ಸಂಭವಿಸಬಹುದು. ಸಮುದಾಯದ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಮುನ್ನೆಚ್ಚರಿಕೆ ಕ್ರಮಗಳು ಅನುಸರಿಸುವಂತಾಗಬೇಕು ಎನ್ನುತ್ತಾರೆ ಅವರು.

ಲಾಕ್‌ಡೌನ್ ಅವಧಿಯ ನಂತರವೂ ದೊಡ್ಡಮಟ್ಟದ ಸಭೆ ಸಮಾರಂಭಗಳನ್ನು ನಿಷೇಧಿಸಬೇಕು, ಸೋಂಕು ಇರಬಹುದೆಂಬ ಅನುಮಾನ ಬಂದವರನ್ನು 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಬೇಕು. ಸೋಂಕು ಪತ್ತೆ ಪರೀಕ್ಷೆಗಳನ್ನು ದೊಡ್ಡಮಟ್ಟದಲ್ಲಿ ನಡೆಸಬೇಕು. ವರ್ಕ್‌ಫ್ರಂ ಹೋಂ ಮುಂದುವರಿಸಬೇಕು ಎಂದು ಸಂಶೋಧಕರು ಹೇಳಿದರು.

ಲಾಕ್‌ಡೌನ್‌ನಿಂದ ರೋಗದ ಮೇಲೆ ಸಾಧಿಸುವ ನಿಯಂತ್ರಣ ಮುಂದುವರಿಯಲು ಮಾಸ್ಕ್ ಬಳಕೆ, ಕೈತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪ್ರಕ್ರಿಯೆಗಳು ಮುಂದುವರಿಯಬೇಕು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.