ADVERTISEMENT

ಬಿಹಾರದಲ್ಲಿ ತಂಬಾಕು ಮುಕ್ತ ಮತಗಟ್ಟೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 5:17 IST
Last Updated 26 ಏಪ್ರಿಲ್ 2019, 5:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಲೋಕಸಭೆ ಚುನಾವಣೆಗಾಗಿ ಸ್ಥಾಪಿಸಲಾಗಿರುವ ಮತಗಟ್ಟೆಗಳನ್ನು ತಂಬಾಕು ಮುಕ್ತಗೊಳಿಸುವುದಾಗಿ ದೆಹಲಿ ಸರ್ಕಾರ ಘೋಷಣೆ ಮಾಡಿದ ಬಳಿಕ ಇದೀಗ ಬಿಹಾರ ಅದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ಬಿಹಾರ ಚುನಾವಣಾ ಆಯೋಗದ ಮುಖ್ಯಸ್ಥ ಎಚ್‌.ಆರ್‌. ಶ್ರೀನಿವಾಸ ಅವರು ಸಿಗರೇಟ್‌ ಹಾಗೂ ಇತರ ತಂಬಾಕು ಉತ್ಪನ್ನ ಕಾಯಿದೆ(ಸಿಒಟಿಪಿಎ)–2003ರ ಅಡಿಯಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದಾರೆ. ಅದರಂತೆ ಪ್ರತಿ ಮತಗಟ್ಟೆಯಲ್ಲಿ ತಂಬಾಕು ಮುಕ್ತವಲಯ ಸೂಚನೆ ನೀಡುವ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸರ್ಕಾರೇತರ ಸಂಘಟನೆ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯು(ಸೀಡ್ಸ್‌) ರಾಜ್ಯ ತಂಬಾಕು ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ, ಆರೋಗ್ಯಕರ ಬಿಹಾರಕ್ಕಾಗಿ ತಂಬಾಕು ಬಳಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಪರಿಗಣಿಸಿ ಚುನಾವಣಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ADVERTISEMENT

‘ದೆಹಲಿ ಬಳಿಕ ಇಂತಹ ಮಾದರಿ ಕ್ರಮ ಕೈಗೊಂಡ ಎರಡನೇ ರಾಜ್ಯ ಬಿಹಾರ. ತಂಬಾಕು ಸೇವನೆಯಿಂದ ಪ್ರತಿವರ್ಷದೇಶದಲ್ಲಿ ಸುಮಾರು 12 ಲಕ್ಷ ಹಾಗೂ ವಿಶ್ವದಲ್ಲಿ ಅಂದಾಜು 54 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’ ಎಂದುಸೀಡ್ಸ್‌ನಕಾರ್ಯನಿರ್ವಾಹಕ ನಿರ್ದೇಶಕ ತಿಳಿಸಿದ್ದಾರೆ.

‘ಮತಗಟ್ಟೆಗಳನ್ನು ತಂಬಾಕು ಮುಕ್ತಗೊಳಸಿರುವುದು ಬಿಹಾರದಲ್ಲಿ ತಂಬಾಕು ವಿರೋಧಿ ಅಭಿಯಾನಕ್ಕೆ ಪ್ರಚೋದನೆ ನೀಡಲಿದ್ದು, ಜೊತೆಗೆ ತಂಬಾಕು ನಿಯಂತ್ರಣ ಕ್ರಮ ಕೈಗೊಳ್ಳಲು ನೆರವಾಗಲಿದೆ.ಕಡಿಮೆ ಅವಧಿಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಲು ಇದು ಪರಿಣಾಮಕಾರಿಯಾದ ಅಸ್ತ್ರವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಗ್ಲೋಬಲ್‌ ಆಡಿಟ್‌ ಟೊಬ್ಯಾಕೋ ಸರ್ವೇ 2017ರ ಪ್ರಕಾರ, ಬಿಹಾರದಲ್ಲಿ ಅಂದಾಜು ಶೇ. 25.9 ಅಥವಾ 1.90 ಕೋಟಿ ಯುವಕರು ತಂಬಾಕು ಸೇವಿಸುತ್ತಾರೆ. ಅದರಲ್ಲಿ 1.70 ಕೋಟಿ ಮಂದಿ ಹೊಗೆರಹಿತ ತಂಬಾಕು ಬಳಕೆದಾರರಾಗಿದ್ದಾರೆ.

40 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ಒಟ್ಟು 72,723 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಏಪ್ರಿಲ್‌ 11ರಿಂದ ಮೇ 19ರ ವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

2014ರ ಲೋಕಸಭೆ ಚುನಾವಣೆ ವೇಳೆ ಬಿಹಾರದಲ್ಲಿ ಮತಗಟ್ಟೆಗಳನ್ನು ಧೂಮಪಾನ ಮುಕ್ತಗೊಳಿಸಲಾಗಿತ್ತು. 2018ರಲ್ಲಿ ಚುನಾವಣಾ ಆಯೋಗವು ದೇಶದ ಎಲ್ಲ ಮತಗಟ್ಟೆಗಳೂ ಧೂಮಪಾನ ಮುಕ್ತವಾಗಿರಬೇಕು ಎಂದು ಸೂಚಿಸಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಇಟ್ಟಿರುವ ಬಿಹಾರ ಎಲ್ಲ ಮತಗಟ್ಟೆಗಳನ್ನೂತಂಬಾಕು ಮುಕ್ತ ಗೊಳಿಸಲು ಹೊರಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.