
ನವದೆಹಲಿ: ದೇಶದ ಎಲ್ಲಾ ರಾಜಭವನಗಳನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ವಿಚಾರವು ರಾಜ್ಯಸಭೆಯಲ್ಲಿ ಬುಧವಾರ ವಾಗ್ವಾದಕ್ಕೆ ಕಾರಣವಾಯಿತು.
ಶೂನ್ಯ ವೇಳೆಯಲ್ಲಿ ಟಿಎಂಸಿ ಸಂಸದೆ ಡೋಲಾ ಸೇನ್ ಅವರು, ‘ರಾಜಭವನಗಳನ್ನು ಲೋಕಭವನ ಎಂದು ಮರುನಾಮಕರಣ ಮಾಡುವ ಕುರಿತ ಕಳವಳ’ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ನವೆಂಬರ್ 25ರಂದು ನೀಡಿರುವ ನಿರ್ದೇಶನವನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಮರುನಾಮಕರಣದ ಬಗ್ಗೆ ಸಂಸತ್ತು, ವಿಧಾನಸಭೆ ಅಥವಾ ಸಂಪುಟಕ್ಕೂ ಮಾಹಿತಿ ಇಲ್ಲ. ಅವರು ನಿಮ್ಮೊಂದಿಗೂ (ಸಭಾಪತಿ) ಚರ್ಚಿಸಿಲ್ಲ’ ಎಂದರು.
ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ನೀಡಬೇಕಿರುವ ನರೇಗಾ ಮತ್ತು ಸರ್ವ ಶಿಕ್ಷಣ ಅಭಿಯಾನ ಯೋಜನೆಗಳ ಅನುದಾನವನ್ನು ನೀಡಿಲ್ಲ ಎಂದು ದೂರಿದರು. ಜನರನ್ನು ನಿರ್ಲಕ್ಷಿಸಿ ಯಾವ ಲೋಕ (ಜನರು) ಭವನದ ಕತೆಯನ್ನು ನಮಗೆ ಹೇಳಹೊರಟಿದ್ದೀರಿ’ ಎಂದು ಪ್ರಶ್ನಿಸಿದರು.
‘ಶೂನ್ಯ ಅವಧಿಯಲ್ಲಿ ಮರುನಾಮಕರಣದ ಬಗ್ಗೆ ಮಾತನಾಡಲು ಅವಕಾಶ ನೀಡಿದರೆ ಅವರು ವಿಷಯಾಂತರ ಮಾಡುತ್ತಿದ್ದಾರೆ’ ಎಂದು ಜೆ.ಪಿ.ನಡ್ಡಾ ಆಕ್ಷೇಪಿಸಿದರು.
‘ಸಂಬಂಧಿಸದ ವಿಷಯಗಳನ್ನು ಕಡತಕ್ಕೆ ಸೇರಿಸುವುದಿಲ್ಲ’ ಎಂದು ಸಭಾಪತಿ ಸಿ.ಪಿ.ರಾಧಾಕೃಷ್ಣನ್ ತಿಳಿಸಿದರು.
ಈ ವೇಳೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ‘ಸೇನ್ ಅವರು ಅಸಂಸದೀಯ ಪದಗಳನ್ನು ಬಳಸಿಲ್ಲ. ಎಲ್ಲವೂ ವಿಷಯಕ್ಕೆ ಸಂಬಂಧಿಸಿದ್ದೇ...ನಡ್ಡಾ ಅವರು ಹಸ್ತಕ್ಷೇಪ ಮಾಡುವಂತಿಲ್ಲ. ಅವರು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಕಲಾಪ ನಡೆಯುವುದು ಅವರಿಗೆ ಬೇಕಿಲ್ಲ’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಡ್ಡಾ ಅವರು, ‘ಹತ್ತಿಕ್ಕುತ್ತಿಲ್ಲ, ಚರ್ಚೆಯ ವಿಷಯಕ್ಕೆ ಸಂಬಂಧಿಸಿದ್ದು ಮಾತ್ರ ಕಡತದಲ್ಲಿ ದಾಖಲೆಯಾಗಲಿ ಎಂದು ಮನವಿ ಮಾಡಲಾಗಿದೆಯಷ್ಟೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.