ADVERTISEMENT

ದೀದಿಯ ತೊರೆದು ‘ಕಮಲ’ ಹಿಡಿದ ಅರ್ಜುನ

ಕಾವೇರುತ್ತಿದೆ ಚುನಾವಣೆ; ಧುರೀಣರ ನೆಗೆತ ಜೋರು

ಪಿಟಿಐ
Published 14 ಮಾರ್ಚ್ 2019, 20:30 IST
Last Updated 14 ಮಾರ್ಚ್ 2019, 20:30 IST
ಟಾಮ್ ವಡಕ್ಕನ್, ಅರ್ಜುನ್ ಸಿಂಗ್
ಟಾಮ್ ವಡಕ್ಕನ್, ಅರ್ಜುನ್ ಸಿಂಗ್   

ನವದೆಹಲಿ:ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಧುರೀಣರ ಪಕ್ಷಾಂತರ ಪರ್ವ ವೇಗ ಪಡೆದುಕೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆರಿಸಿ ಬಂದಿರುವ ಅರ್ಜುನ್ ಸಿಂಗ್ ಅವರು ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಗುರುವಾರ ವಿದಾಯ ಹೇಳಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಪಕ್ಷಕ್ಕೆ ತೀವ್ರ ಏಟು ನೀಡಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹಾಗೂ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ADVERTISEMENT

ಟಿಎಂಸಿ ಪ್ರಬಲ ನಾಯಕ ದಿನೇಶ್ ತ್ರಿವೇದಿ ವಿರುದ್ಧ ಅರ್ಜುನ್ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಮಮತಾ ಅವರು ತಮಗೆ ಟಿಕೆಟ್ ನೀಡಿಲಿಲ್ಲ ಎಂಬ ಕಾರಣಕ್ಕೆ ಅರ್ಜುನ್ ತೀವ್ರ ಅಸಮಾಧಾನಗೊಂಡಿದ್ದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅರ್ಜುನ್ ಸಿಂಗ್, ‘ಪುಲ್ವಾಮಾ ದಾಳಿಯ ಕುರಿತು ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆಗಳು ತಮಗೆ ಅಚ್ಚರಿ ಮೂಡಿಸಿದವು’ ಎಂದಿದ್ದಾರೆ. ‘ವಾಯುಪಡೆ ದಾಳಿ ನಡೆಸಿದಾಗ ಮಮತಾ ಅವರು ಉಗ್ರರ ಹೆಣಗಳ ಸಂಖ್ಯೆ ಕೇಳಿದರು. ಒಬ್ಬ ನಾಯಕಿಗೆ ರಾಷ್ಟ್ರೀಯ ಹಿತಾಸಕ್ತಿ ಇಲ್ಲ ಎಂದಾದರೆ ಅವರು ಮತದಾರರಿಗೆ ಒಳ್ಳೆಯದನ್ನು ಮಾಡಲು ಹೇಗೆ ಸಾಧ್ಯ? ಎಂದು ಸಿಂಗ್ ಪ್ರಶ್ನಿಸಿದ್ದಾರೆ.

**

ನಾನು ಮಮತಾ ಅವರಿಗಾಗಿ 30 ವರ್ಷಗಳನ್ನು ನೀಡಿದ್ದೇನೆ. ಈ ಮೊದಲು ಟಿಎಂಸಿ ಪಕ್ಷವು ಮಾ, ಮತಿ, ಮಾನುಷ ಎಂಬ ನಿಲುವು ಹೊಂದಿತ್ತು. ಇದೀಗ ಮನಿ, ಮನಿ ಮತ್ತು ಮನಿ (ಹಣ) ಎಂಬಂತಾಗಿದೆ.
-ಅರ್ಜುನ್ ಸಿಂಗ್

**

ಎರಡು ದಶಕಗಳಿಂದ ಕಾಂಗ್ರೆಸ್ ನನಗೆ ಜೀವನ ಕೊಟ್ಟಿದೆ. ಆದರೆ ಈಗ ಬಳಸಿಕೊಂಡು ಬಿಸಾಡುವ ಪ್ರವೃತ್ತಿ ಆರಂಭಿಸಿದೆ. ಕುಟುಂಬ ರಾಜಕಾರಣವು ಕಾಂಗ್ರೆಸ್‌ನಲ್ಲಿ ಉಚ್ಛ್ರಾಯ ಮಟ್ಟ ತಲುಪಿದೆ.
-ಟಾಮ್ ವಡಕ್ಕನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.