ADVERTISEMENT

ಲೋಕಸಭೆ ಚುನಾವಣೆ ಇತಿಹಾಸದಲ್ಲೇ ಅತಿಹೆಚ್ಚು ಹಣ ವಶಕ್ಕೆ ಪಡೆದ ಚುನಾವಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 18 ಮೇ 2019, 6:55 IST
Last Updated 18 ಮೇ 2019, 6:55 IST
   

ನವದೆಹಲಿ: ಲೋಕಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಚುನಾವಣಾ ಆಯೋಗವು ಚುನಾವಣೆ ಪ್ರಚಾರದ ವೇಳೆ ವಶಪಡಿಸಿಕೊಂಡಿರುವ ಅಕ್ರಮ ಹಣದ ಲೆಕ್ಕ ಬಿಡುಗಡೆ ಮಾಡಿದೆ.

ಈ ಬಾರಿ ಒಟ್ಟು ₹ 3,439 ಕೋಟಿ ವಶಪಡಿಸಿಕೊಳ್ಳಲಾಗಿದ್ದು, ಇದು ಲೋಕಸಭೆ ಚುನಾವಣೆ ಇತಿಹಾಸದಲ್ಲಿಯೇ ದೊಡ್ಡ ಮೊತ್ತವಾಗಿದೆ. 2014ರ ಚುನಾವಣೆ ವೇಳೆ ಆಯೋಗವು ಒಟ್ಟು ₹ 1,200 ಕೋಟಿ ವಶಕ್ಕೆ ಪಡೆದಿತ್ತು.

ತಮಿಳುನಾಡಿನಲ್ಲಿ ಒಟ್ಟು950 ಕೋಟಿ ಅಕ್ರಮ ಹಣ ಸಿಕ್ಕಿದೆ. ಗುಜರಾತ್‌, ದೆಹಲಿಯಲ್ಲಿ ಕ್ರಮವಾಗಿ ₹ 552, ₹ 426 ಕೋಟಿ ವಶಪಡಿಸಿಕೊಳ್ಳಲಾಗಿದೆ. ಈ ಮೂರು ರಾಜ್ಯಗಳು ಕ್ರಮವಾಗಿಒಂದು,ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ADVERTISEMENT

ಅಕ್ರಮಹಣ ಮಾತ್ರವಲ್ಲದೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಮಾರ್ಚ್‌ 10ರಿಂದ ಇಲ್ಲಿಯವರೆಗೆ ಒಟ್ಟು 500 ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಆರು ದೂರುಗಳು ದಾಖಲಾಗಿದ್ದು, ಎಲ್ಲ ಪ್ರಕರಣಗಳಿಂದ ಅವರು ಕ್ಲೀನ್‌ ಚಿಟ್‌ ಪಡೆದುಕೊಂಡಿದ್ದಾರೆ.ಆಯೋಗವು ಮೋದಿ ಅವರಿಗೆ ಕ್ಲೀನ್‌ ಚಿಟ್‌ ನೀಡಿದ್ದನ್ನು ವಿರೋಧ ಪಕ್ಷಗಳು ವಿರೋಧಿಸಿದ್ದವು.

ನರೇಂದ್ರ ಮೋದಿ ಅವರ ಜೀವನಾಧಾರಿತ ಸಿನಿಮಾ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆ ವಿಚಾರ ಸೇರಿದಂತೆಹಲವು ವಿವಾದಗಳೂ ಚುನಾವಣಾ ಆಯೋಗವನ್ನು ಸುತ್ತಿಕೊಂಡಿದ್ದವು.

ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಎಸ್‌ಪಿ ನಾಯಕಿ ಮಾಯಾವತಿ, ಎಸ್‌ಪಿ ನಾಯಕ ಆಜಂ ಖಾನ್‌, ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅವರಿಗೆ ನಿರ್ಧಿಷ್ಟ ಅವಧಿಯವರೆಗೆ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಲಾಗಿತ್ತು. ಆಯೋಗಕ್ಕೆ ದಾಖಲಾದ ದೂರುಗಳ ಅನ್ವಯ ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವು ಪೋಸ್ಟ್‌ಗಳನ್ನು ಹಿಂಪಡೆಯಲಾಗಿತ್ತು. ನೀತಿ ಸಂಹಿತೆ ಜಾರಿಯಾದ ಬಳಿಕ ಫೇಸ್‌ಬುಕ್‌ನಲ್ಲಿ 650, ಟ್ವಿಟರ್‌ನಲ್ಲಿ 160, ಶೇರ್‌ಚಾಟ್‌ನಲ್ಲಿ 31, ಗೂಗಲ್‌ನಲ್ಲಿ 5 ಫೋಸ್ಟ್‌ಗಳನ್ನು ಹಾಗೂ ಹಲವು ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಹಿಂಪಡೆಯಲಾಗಿತ್ತು.

ಈ ಬಾರಿ ದೇಶದ ಎಲ್ಲ ಮತಕೇಂದ್ರಗಳಲ್ಲಿ ಒಟ್ಟು 10.11 ಲಕ್ಷ ವಿವಿಪ್ಯಾಟ್‌ಗಳನ್ನು ಬಳಸಲಾಗಿದೆ. ಇದು ಚುನಾವಣಾ ಆಯೋಗ ಎದುರಿಸಿದ ಬಹುದೊಡ್ಡ ಸವಾಲಾಗಿತ್ತು.

ಬಿಹಾರದ 8, ಹಿಮಾಚಲ ಪ್ರದೇಶದ 4, ಮಧ್ಯಪ್ರದೇಶದ 8, ಜಾರ್ಖಂಡ್‌ನ 3, ಪಶ್ಚಿಮ ಬಂಗಾಳದ 9, ಚಂಡೀಗಡದ 1,ಪಂಜಾಬ್‌ ಹಾಗೂ ಉತ್ತರ ಪ್ರದೇಶದ ತಲಾ 13 ಸೇರಿ ಒಟ್ಟು 59 ಕ್ಷೇತ್ರಗಳಿಗೆಭಾನುವಾರ ಕೊನೆಯ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮೊದಲು, ಮಹಾತ್ಮ ಗಾಂಧಿ ಹತ್ಯೆಗೈದ ನಾಥೂರಾಂ ಗೂಡ್ಸೆಯನ್ನು ‘ದೇಶ ಭಕ್ತ’ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಪ್ರಧಾನಿ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಇನ್ನಿತರರನ್ನು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಚುನಾವಣೆ ಆಯೋಗ ಸ್ಪಷ್ಟನೆ ಕೋರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.