ADVERTISEMENT

‘ಇಂಥವರ ತಾಯಿ, ಇಂಥವರ ಪತ್ನಿ’ಗೆ ಮತ ಇರಲಿಲ್ಲ

1951ರ ಸಾರ್ವತ್ರಿಕ ಚುನಾವಣೆಯ ಸೋಜಿಗ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 20:27 IST
Last Updated 14 ಮಾರ್ಚ್ 2019, 20:27 IST
   

ನವದೆಹಲಿ: ಇದು ಆಶ್ಚರ್ಯವಾದರೂ ಸತ್ಯ. 1951–52ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ 28 ಲಕ್ಷ ಮಹಿಳೆಯರು ಮತ ಚಲಾಯಿಸುವುದು ಸಾಧ್ಯವಾಗಲಿಲ್ಲ. ಆಗಿನ ಮುಖ್ಯ ಚುನಾವಣಾ ಆಯುಕ್ತ ಸುಕುಮಾರ್‌ ಸೆನ್‌ ಅವರು ಅವಕಾಶ ಕೊಡದಿದ್ದೇ ಇದಕ್ಕೆ ಕಾರಣ.

ಅವರು ಅವಕಾಶ ನಿರಾಕರಿಸಲು ಕಾರಣ ಇತ್ತು. ಈ 28 ಲಕ್ಷ ಮಹಿಳೆಯರು ಮತದಾರರ ಪ‍ಟ್ಟಿಯಲ್ಲಿ ತಮ್ಮ ಸ್ವಂತ ಹೆಸರು ಕೊಡಲು ನಿರಾಕರಿಸಿದ್ದರು. ತಮ್ಮನ್ನು ‘ಇಂಥವರ ತಾಯಿ’ ಅಥವಾ ‘ಇಂಥವರ ಪತ್ನಿ’ ಎಂದೇ ಮತದಾರರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಈ ಮಹಿಳೆಯರು ಹಟ ಹಿಡಿದಿದ್ದರಂತೆ. ಇಂತಹ ಬಹುತೇಕ ಪ್ರಕರಣಗಳು ನಡೆದದ್ದು ಬಿಹಾರ, ಉತ್ತರ ಪ್ರದೇಶ, ಮಧ್ಯ ಭಾರತ, ರಾಜಸ್ಥಾನ ಮತ್ತು ವಿಂಧ್ಯ ಪ್ರದೇಶದಲ್ಲಿ.

ಮತದಾರರ‍‍ಪಟ್ಟಿಯನ್ನು ಅಂತಿಮಗೊಳಿಸುವ ಹೊತ್ತಿಗೆ ಇದು ಸುಕುಮಾರ್‌ ಅವರ ಗಮನಕ್ಕೆ ಬಂತು. ಪುರುಷನೊಬ್ಬನ ಜತೆಗಿನ ಸಂಬಂಧದ ಹೆಸರಿನಲ್ಲಿಯೇ ಸಾಕಷ್ಟು ಮಹಿಳೆಯರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದರು. ಇವರ‍್ಯಾರಿಗೂ ತಮ್ಮ ಹೆಸರನ್ನು ಬಹಿರಂಗಪಡಿಸಲು ಇಷ್ಟವೇ ಇರಲಿಲ್ಲ.

ADVERTISEMENT

ಮತ ಚಲಾಯಿಸಬೇಕಿದ್ದರೆ ಮತದಾರರ ಪಟ್ಟಿಯಲ್ಲಿ ಸ್ವಂತ ಹೆಸರೇ ಇರಬೇಕು ಎಂದು ಚುನಾವಣಾ ಆಯೋಗವು ನಿರ್ದೇಶನ ನೀಡಿತು. ‘ಹೆಸರು ಮತ್ತು ಇತರ ಅಗತ್ಯ ಮಾಹಿತಿಗಳನ್ನು ನೀಡದೇ ಇದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದಕ್ಕೆ ಅವಕಾಶ ಇಲ್ಲ’ ಎಂದು ಮೊದಲ ಚುನಾವಣೆ ಬಗೆಗಿನ ಟಿಪ್ಪಣಿಯಲ್ಲಿ ಸುಕುಮಾರ್‌ ಅವರು 1955ರಲ್ಲಿ ಬರೆದಿದ್ದಾರೆ.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಬೇಕು ಎಂಬ ಕಾರಣಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಪುರುಷ ಸಂಬಂಧಿಯ ಹೆಸರಿನ ಮೂಲಕ ನೋಂದಣಿ ಮಾಡಿಕೊಂಡಿದ್ದ ಮಹಿಳೆಯರು ತಮ್ಮ ಸ್ವಂತ ಹೆಸರು ಕೊಡುವುದಕ್ಕಾಗಿ ನೋಂದಣಿ ಅವಧಿಯನ್ನು ಬಿಹಾರ ಮತ್ತು ರಾಜಸ್ಥಾನದಲ್ಲಿ ಒಂದು ತಿಂಗಳು ವಿಸ್ತರಿಸಲಾಯಿತು. ಆದರೆ, ಆಗಲೂ ಇದಕ್ಕೆ ಸಿಕ್ಕ ಪ್ರತಿಕ್ರಿಯೆ ನಿರಾಶಾದಾಯಕವೇ ಆಗಿತ್ತು.

ಆಗ ‘ದೇಶದಲ್ಲಿ 8 ಕೋಟಿ ಮಹಿಳಾ ಮತದಾರರಿದ್ದರು. ಅವರಲ್ಲಿ 28 ಲಕ್ಷ ಮತದಾರರು ತಮ್ಮ ಹೆಸರು ಕೊಡಲೇ ಇಲ್ಲ. ಹಾಗಾಗಿ, ಕೊನೆಗೆ ಅವರ ನೋಂದಣಿಯನ್ನು ಮತದಾರರ ಪಟ್ಟಿಯಿಂದ ಅಳಿಸಲಾಯಿತು’ ಎಂದು ಸುಕುಮಾರ್‌ ಬರೆದಿದ್ದಾರೆ.

1957ರಲ್ಲಿ ಎರಡನೇ ಸಾರ್ವತ್ರಿಕ ಚುನಾವಣೆ ನಡೆಸುವ ಅವಕಾಶವೂ ಸುಕುಮಾರ್‌ ಅವರಿಗೇ ದೊರೆಯಿತು. ಐದು ವರ್ಷಗಳ ಬಳಿಕ ಪರಿಸ್ಥಿತಿ ಸಾಕಷ್ಟು ಬದಲಾಗಿತ್ತು. ತಮ್ಮ ಅಕ್ಕಪಕ್ಕದವರಿಗೆ ಮತ ಹಾಕುವ ಅವಕಾಶ ದೊರೆತು ತಮಗೆ ದೊರೆತಿಲ್ಲ ಎಂಬುದು ಹೆಸರು ಅಳಿಸಲಾದ ಮಹಿಳೆಯರಿಗೆ ಭಾರಿ ಬೇಸರಕ್ಕೆ ಕಾರಣವಾಯಿತು. ತಮಗೂ ಮತದಾನದ ಹಕ್ಕು ಬೇಕು ಎಂಬ ಭಾವನೆ ಅವರಲ್ಲಿ ಮೂಡಿತ್ತು.

‘ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗಬೇಕಿದ್ದರೆ ಹೆಸರು ಕೊಡುವುದು ಕಡ್ಡಾಯ ಎಂಬುದನ್ನು ಮಹಿಳೆಯರಿಗೆ ಮನವರಿಕೆ ಮಾಡುವಂತೆ ಮೊದಲ ಚುನಾವಣೆ ಬಳಿಕ ಸುಕುಮಾರ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಇದಕ್ಕಾಗಿ, ರಾಜಕೀಯ ಪಕ್ಷಗಳು ಮತ್ತು ಸ್ಥಳೀಯ ಮಹಿಳಾ ಸಂಘಟನೆಗಳನ್ನು ಬಳಸಿಕೊಳ್ಳಲಾಯಿತು. ಎರಡನೇ ಸಾರ್ವತ್ರಿಕ ಚುನಾವಣೆ ಹೊತ್ತಿಗೆ 9.21 ಕೋಟಿ ಮಹಿಳೆಯರು ತಮ್ಮ ಹೆಸರು ಕೊಟ್ಟು ನೋಂದಣಿ ಮಾಡಿಸಿಕೊಂಡಿದ್ದರು.

‘ಶೇ 94ರಷ್ಟು ಮಹಿಳೆಯರು ಮತದಾರರಾಗಿ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು 1957ರ ಚುನಾವಣೆ ಬಳಿಕ ಸುಕುಮಾರ್‌ ಅವರು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.