ADVERTISEMENT

ಲೋಕಸಭೆ ಚುನಾವಣೆ ಜಗತ್ತಿನಲ್ಲೇ ಅತ್ಯಂತ ದುಬಾರಿ: ದಾಖಲೆಯ ₹60 ಸಾವಿರ ಕೋಟಿ ಖರ್ಚು

ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ವರದಿ

ಶೆಮಿಜ್‌ ಜಾಯ್‌
Published 4 ಜೂನ್ 2019, 9:28 IST
Last Updated 4 ಜೂನ್ 2019, 9:28 IST
   

ನವದೆಹಲಿ: ಜಿದ್ದಾಜಿದ್ದಿನ ಸ್ಪರ್ಧೆಗೆ ಸಾಕ್ಷಿಯಾದ ಈ ಬಾರಿಯ ಲೋಕಸಭಾ ಚುನಾವಣೆಯು ವೆಚ್ಚದ ವಿಚಾರದಲ್ಲಿಯೂ ದಾಖಲೆ ಸೃಷ್ಟಿಸಿದೆ. ಚುನಾವಣೆಗೆ ಆಗಿರುವ ವೆಚ್ಚ ₹55 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ. ಹಾಗಾಗಿ ಇದು ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಚುನಾವಣೆ ಎನ್ನಲಾಗಿದೆ.

ಆಡಳಿತಾರೂಢ ಬಿಜೆಪಿ ಮಾಡಿದ ಖರ್ಚಿನ ಪ್ರಮಾಣವುಒಟ್ಟು ವೆಚ್ಚದಲ್ಲಿ ಶೇ 45ರಷ್ಟು ಎಂದು ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ (ಸಿಎಂಎಸ್‌) ವರದಿ ಹೇಳಿದೆ.

ಒಂದು ಮತಕ್ಕೆ ₹700 ಖರ್ಚಾಗಿದೆ, ಒಂದು ಕ್ಷೇತ್ರದಲ್ಲಿ ಆಗಿರುವ ವೆಚ್ಚ ಸುಮಾರು ₹100 ಕೋಟಿ. 1998ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ವೆಚ್ಚವು ಆರರಿಂದ ಏಳು ಪಟ್ಟು ಏರಿಕೆಯಾಗಿದೆ ಎಂದು ಸಿಎಂಎಸ್‌ ವರದಿ ಅಂದಾಜಿಸಿದೆ. 1998ರ ಚುನಾವಣೆಗೆ ₹9 ಸಾವಿರ ಕೋಟಿ ವೆಚ್ಚ ಆಗಿತ್ತು.

ADVERTISEMENT

ಹಣ ಪಡೆದುಕೊಂಡಿದ್ದೇವೆ ಎಂದು ಶೇ 10–12ರಷ್ಟು ಮತದಾರರು ಒಪ್ಪಿದ್ದಾರೆ. ತಮ್ಮ ಸುತ್ತಲಿನ ಜನರು ಮತಕ್ಕಾಗಿ ಹಣ ಪಡೆದುಕೊಂಡಿದ್ದಾರೆ ಎಂದು ಶೇ 66ರಷ್ಟು ಮತದಾರರು ಹೇಳಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಮತದಾರರನ್ನು ಸಂಪರ್ಕಿಸಿ ಹಣ ಮತ್ತು ಇತರ ಆಮಿಷಗಳನ್ನು ಒಡ್ಡಲು ಮಧ್ಯವರ್ತಿಗಳ ಬಳಕೆ ಹೊಸದೇನಲ್ಲ. ಆದರೆ, ಈ ಬಾರಿ ಮಧ್ಯವರ್ತಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಮಧ್ಯವರ್ತಿಗಳ ಬಳಕೆ ಹೆಚ್ಚಿನ ರಾಜಕೀಯ ಪಕ್ಷಗಳ ಕಾರ್ಯತಂತ್ರದ ಭಾಗವೇ ಆಗಿದೆ. ಎಲ್ಲ ಮತದಾರರಿಗೂ ಹಣದ ಆಮಿಷ ಒಡ್ಡಲಾಗಿಲ್ಲ. ಕೆಲವರಿಗೆ ಸ್ಥಾನಗಳು ಮತ್ತು ಬೆಂಬಲದ ಭರವಸೆ ಕೊಡಲಾಗಿದೆ ಎಂದು ವರದಿ ಹೇಳಿದೆ.

ಪಿಂಚಣಿ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌, ಮನೆ ನಿರ್ಮಾಣ, ಉದ್ಯೋಗ ಮುಂತಾದವುಗಳನ್ನು ಪಕ್ಷ ಅಧಿಕಾರಕ್ಕೆ ಬಂದರೆ ನೀಡಲಾಗುವುದು ಎಂದು ಭರವಸೆ ಕೊಡಲಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಕೊಡಿಸುವುದಾಗಿ ಭರವಸೆ ಕೊಡಲಾಗಿದೆ ಎಂದು ಶೇ 10ರಷ್ಟು ಮತದಾರರು ಹೇಳಿದ್ದಾರೆ.

ಮತದಾನಕ್ಕೆ ಮುನ್ನಾದಿನ ತಮಗೆ ಚುನಾವಣಾ ಪ್ರಚಾರದ ಎಸ್‌ಎಂಎಸ್‌ ಬಂದಿದೆ ಎಂದು ಶೇ 40ರಷ್ಟು ಮತದಾರರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಮತ್ತು ಎಸ್‌ಎಂಎಸ್‌ ಸೇವೆ ಈಗ ಚುನಾವಣೆಯ ಪ್ರಮುಖ ವೆಚ್ಚಗಳಲ್ಲಿ ಒಂದಾಗಿದೆ.1998ರ ಲೋಕಸಭಾ ಚುನಾವಣೆಯ ವೆಚ್ಚದಲ್ಲಿ ಬಿಜೆಪಿಯ ಪಾಲು ಶೇ 20ರಷ್ಟು ಇತ್ತು. 2009ರ ವೆಚ್ಚದಲ್ಲಿ ಕಾಂಗ್ರೆಸ್‌ನ ಪಾಲು ಶೇ 45ರಷ್ಟಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಏರಿತ್ತು. ಈ ಬಾರಿ ಕಾಂಗ್ರೆಸ್‌ನ ಪಾಲು ಶೇ 15ರಿಂದ 20.

ಮೇಲ್ನೋಟಕ್ಕೆ ಗೋಚರಿಸುವ ವೆಚ್ಚಗಳು ಮಾತ್ರ ಈ ಅಂದಾಜಿನಲ್ಲಿ ಸೇರಿವೆ. ಇದು ನೀರ್ಗಲ್ಲಿನ ತುತ್ತ ತುದಿ ಮಾತ್ರ. ನೀರ್ಗಲ್ಲು ಎಷ್ಟು ವಿಸ್ತಾರವಾಗಿದೆ ಮತ್ತು ಆಳಕ್ಕಿದೆ ಎಂಬುದು ಊಹೆಗಷ್ಟೇ ಬಿಟ್ಟ ವಿಚಾರ. ಇದು ಪ್ರಜಾಪ್ರಭುತ್ವವನ್ನು ಹೇಗೆ ಹಾನಿ ಮಾಡಬಹುದು ಎಂಬುದು ಕಲ್ಪನೆಗೆ ಬಿಟ್ಟದ್ದು ಎಂದು ಸಿಎಂಎಸ್‌ ಪ್ರಧಾನ ನಿರ್ದೇಶಕಿ ಪಿ.ಎನ್. ವಾಸಂತಿ ಹೇಳಿದ್ದಾರೆ.

ಮಂಡ್ಯದಲ್ಲಿ ಭಾರಿ ವೆಚ್ಚ

80–85 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಹಣ ಹರಿದಾಡಿದೆ ಎಂದು ವರದಿ ಹೇಳಿದೆ. ಕರ್ನಾಟಕದ ಮಂಡ್ಯ, ಕಲಬುರ್ಗಿ ಮತ್ತು ಶಿವಮೊಗ್ಗ, ಉತ್ತರ ಪ್ರದೇಶದ ಅಮೇಠಿ, ಮಹಾರಾಷ್ಟ್ರದ ಬಾರಾಮತಿ, ಕೇರಳದ ತಿರುವನಂತಪುರ ಅತಿ ಹೆಚ್ಚು ವೆಚ್ಚ ಮಾಡಲಾಗಿರುವ ಕ್ಷೇತ್ರಗಳು ಎಂದು ಸಿಎಂಎಸ್‌ ಗುರುತಿಸಿದೆ.

ಘೋಷಣೆಗೆ ಮೊದಲಿನ ವೆಚ್ಚ ಸೇರಿಲ್ಲ: ಗ್ರಹಿಕೆಗಳು, ಅನುಭವಗಳು ಮತ್ತು ಅಂದಾಜುಗಳ ಆಧಾರದಲ್ಲಿ ವೆಚ್ಚದ ಲೆಕ್ಕ ಹಾಕಲಾಗಿದೆ. ಚುನಾವಣಾ ಆಯೋಗವು ದಿನಾಂಕ ಪ್ರಕಟಿಸುವುದಕ್ಕೆ ಮುಂಚೆ ಮಾಡಲಾದ ಜಾಹೀರಾತು ಮತ್ತು ಪ್ರಚಾರದ ವೆಚ್ಚ ಇದರಲ್ಲಿ ಸೇರಿಲ್ಲ.

ವೆಚ್ಚದ ಹಂಚಿಕೆ

* ₹12,000 ಕೋಟಿಯಿಂದ ₹15,000 ಕೋಟಿ;ಶೇ 20–25 ಮತದಾರರಿಗೆ ಹಂಚಿಕೆ

* ₹20,000 ಕೋಟಿಯಿಂದ ₹25,000 ಕೋಟಿ;ಪ್ರಚಾರ ವೆಚ್ಚ

* 5,000 ಕೋಟಿಯಿಂದ ₹6,000 ಕೋಟಿ;ಓಡಾಟ ಮತ್ತಿತರ ವ್ಯವಸ್ಥೆಗಳ ಖರ್ಚು

* ₹3,000 ಕೋಟಿಯಿಂದ ₹6,000 ಕೋಟಿ; ಇತರ ವೆಚ್ಚ

* ₹10,000 ಕೋಟಿಯಿದ ₹12,000 ಕೋಟಿ;ಚುನಾವಣಾ ಆಯೋಗ ಹೇರಿದ ಮಿತಿಯೊಳಗಿನ ಖರ್ಚು

**

ಅಪರಾಧ ಹಿನ್ನೆಲೆಯವರ ರಾಜಕೀಯ ಪ್ರವೇಶ, ವ್ಯಾಪಕ ಹಣದ ಬಳಕೆಗೆ ತಡೆ ಒಡ್ಡದಿದ್ದರೆ ಭವಿಷ್ಯದಲ್ಲಿ ಮುಕ್ತ ಮತ್ತು ಪಾರದರ್ಶಕ ಚುನಾವಣೆಗಳು ಸಾಧ್ಯವೇ ಇಲ್ಲ
– ಎಸ್‌.ವೈ. ಖುರೇಷಿ, ಮಾಜಿ ಮುಖ್ಯ ಚುನಾವಣಾ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.