ADVERTISEMENT

ಕಲಾಪದ ನಡುವೆಯೇ ಮಲ್ಲಿಕಾರ್ಜುನ ಖರ್ಗೆಗೆ ಇ.ಡಿ ಸಮನ್ಸ್

ನ್ಯಾಷನಲ್ ಹೆರಾಲ್ಡ್‌ ಪ್ರಕರಣ l ಜಾರಿ ನಿರ್ದೇಶನಾಲಯದ ವಿರುದ್ಧ ವಿಪಕ್ಷಗಳ ಆರೋಪ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 21:15 IST
Last Updated 4 ಆಗಸ್ಟ್ 2022, 21:15 IST
ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ : ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆ ಕಲಾಪದ ಮಧ್ಯೆಯೇ ಜಾರಿ ನಿರ್ದೇಶನಾಲಯವು (ಇ.ಡಿ) ನೋಟಿಸ್‌ ನೀಡಿದೆ.ಈ ಮೂಲಕ ಸಂಸತ್ತಿಗೆ ಇ.ಡಿ ಅವಮಾನ ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ನ್ಯಾನಷಲ್ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಗುರುವಾರ ಇಲ್ಲಿನ ಯಂಗ್ ಇಂಡಿಯನ್ ಕಚೇರಿಯಲ್ಲಿ ಶೋಧ ಕಾರ್ಯ ನಡೆಸುವ ವೇಳೆ ಹಾಜರಿರಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ ಅವರಿಗೆ ಸಮನ್ಸ್‌ ನೀಡಿತ್ತು. ಈ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ ಖರ್ಗೆ ಅವರು, ಕಲಾಪದ ಮಧ್ಯೆಯೇ 12.40ಕ್ಕೆ ಸದನದಿಂದ ಹೊರ ನಡೆದರು.

ಇ.ಡಿಯ ಈ ಕ್ರಮವನ್ನು ವಿರೋಧ ಪಕ್ಷಗಳು ರಾಜ್ಯಸಭೆಯ ಕಲಾಪದಲ್ಲೇ ಖಂಡಿಸಿದವು.

ADVERTISEMENT

ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಖರ್ಗೆ ಅವರು,‘ನಾನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ. ಈಗ ಸಂಸತ್ತಿನ ಅಧಿವೇಶನ ನಡೆಯುತ್ತಿದೆ. ಅದರ ಮಧ್ಯೆಯೇ ಹಾಜರಾಗುವಂತೆ, ಇ.ಡಿ ಸಮನ್ಸ್ ನೀಡಿದೆ. ಇದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು. ವಿರೋಧ ಪಕ್ಷಗಳ ಸದಸ್ಯರು ಅವರಿಗೆ ಬೆಂಬಲ ಸೂಚಿಸಿ, ‘ನಾಚಿಕೆಯಾಗಬೇಕು’ ಎಂದು ಕೂಗಿದರು.

ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಮ್ ರಮೇಶ್ ಮಾತನಾಡಿ, ‘ಮೋದಿಶಾಹಿ’ಯು ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಪೀಯೂಷ್ ಗೋಯಲ್ ಅವರು, ‘ತನಿಖಾ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ನಮ್ಮ ಸರ್ಕಾರವು ಹಸ್ತಕ್ಷೇಪ ಮಾಡುವುದಿಲ್ಲ. ಅವರ ಸರ್ಕಾರ ಹಸ್ತಕ್ಷೇಪ ಮಾಡುತ್ತಿತ್ತೇನೊ. ಆದರೆ, ನಾವು ಅಂಥದ್ದೇನೂ ಮಾಡುವುದಿಲ್ಲ’ ಎಂದರು.

ಕಲಾಪ ಮುಂದೂಡಿಕೆ:
ಯಂಗ್‌ ಇಂಡಿಯನ್‌ ಕಚೇರಿಗೆ ಇ.ಡಿ ಅಧಿಕಾರಿಗಳು ಬೀಗ ಹಾಕಿದ್ದನ್ನು ಖಂಡಿಸಿ ಕಾಂಗ್ರೆಸ್‌ ಸಂಸದರು ಗುರುವಾರ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಗದ್ದಲ ನಡೆದ ಕಾರಣ ಲೋಕಸಭೆಯ ಕಲಾಪವನ್ನು ಮುಂದೂಡಲಾಯಿತು.

ಕಲಾಪದ ಮಧ್ಯೆಯೇ ವಿರೋಧ ಪಕ್ಷದ ನಾಯಕನಿಗೆ ಸಮನ್ಸ್ ನೀಡಲಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಂತಹದ್ದು ಘಟಿಸಿರಲಿಲ್ಲ

-ದಿಗ್ವಿಜಯ ಸಿಂಗ್,ಕಾಂಗ್ರೆಸ್‌ ಹಿರಿಯ ನಾಯಕ

–––

ಸಂಸತ್ ಅಧಿವೇಶನದ ಮಧ್ಯೆಯೇ ಖರ್ಗೆ ಅವರಿಗೆ ಸಮನ್ಸ್ ನೀಡಲಾಗಿದೆ. ಈ ಮೂಲಕ ‘ಮೋದಿಶಾಹಿ’ಯು ಇನ್ನಷ್ಟು ಕೆಳಮಟ್ಟಕ್ಕೆ ಇಳಿದಿದೆ

-ಜೈರಾಮ್ ರಮೇಶ್, ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಮುಖ್ಯ ಸಚೇತಕ

–––

ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಕಾಂಗ್ರೆಸ್‌ ನಾಯಕರು ಪಲಾಯನದ ಬದಲು ಕಾನೂನನ್ನು ಪಾಲಿಸಲಿ

ಪೀಯೂಷ್ ಗೋಯಲ್, ಕೇಂದ್ರ ಸಚಿವ

–––

ನಾನೇನು ಕಾನೂನಿನಿಂದ ದೂರ ಓಡುತ್ತಿಲ್ಲ. ಮಧ್ಯಾಹ್ನ 12.30ಕ್ಕೆ ಇ.ಡಿ ಮುಂದೆ ಹಾಜರಾಗುತ್ತಿದ್ದೇನೆ. ನಮ್ಮನ್ನು ಬೆದರಿಸಲು ಯತ್ನಿಸಲಾಗುತ್ತಿದೆ. ಆದರೆ, ನಾವು ಬಗ್ಗುವವರಲ್ಲ

-ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.