‘ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025‘ ಪ್ರತಿ ಹರಿದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರತ್ತ ಎಸೆದ ವಿರೋಧ ಪಕ್ಷಗಳ ನಾಯಕರು
ಕೃಪೆ: X / @PTI_News
ನವದೆಹಲಿ: ಗಂಭೀರ ಅಪರಾಧ ಪ್ರಕರಣಗಳಲ್ಲಿ 30 ದಿನಗಳ ವರೆಗೆ ಬಂಧನಕ್ಕೊಳಗಾಗುವ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಹುದ್ದೆಯಿಂದ ಅಮಾನತು ಮಾಡಲು ಅವಕಾಶ ಕಲ್ಪಿಸುವ ಮಸೂದೆ ಮಂಡನೆ ವೇಳೆ ಲೋಕಸಭೆಯಲ್ಲಿ ಇಂದು (ಬುಧವಾರ) ಭಾರಿ ಗದ್ದಲ ಸೃಷ್ಟಿಯಾಯಿತು.
ಸದನದ ಬಾವಿಗೆ ಇಳಿದ ವಿರೋಧ ಪಕ್ಷಗಳ ಸಂಸದರು ಮಸೂದೆಯ ಪ್ರತಿಯನ್ನು ಹರಿದು ಪ್ರತಿಭಟಿಸಿದರು.
ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರ ಪದಚ್ಯುತಿಗೆ ಅವಕಾಶ ಕಲ್ಪಿಸುವ ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025 ಅನ್ನು ಜಾರಿಗೊಳಿಸಲು ಕೇಂದ್ರ ಸಜ್ಜಾಗಿದೆ. ಇದನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ರವಾನಿಸುವ ಗೊತ್ತುವಳಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಲಾರಂಭಿಸುತ್ತಿದ್ದಂತೆ ಪ್ರತಿಭಟನೆ ಆರಂಭವಾಯಿತು.
ತೃಣಮೂಲ ಕಾಂಗ್ರೆಸ್ ಸಂಸದರು ಕಲ್ಯಾಣ್ ಬ್ಯಾನರ್ಜಿ ನೇತೃತ್ವದಲ್ಲಿ ಶಾ ಅವರತ್ತ ಧಾವಿಸಿದರು. ಈ ವೇಳೆ, ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ರವನೀತ್ ಬಿಟ್ಟು ಅವರು ಮಧ್ಯಪ್ರವೇಶಿಸಿ ಗೃಹ ಸಚಿವರ ನೆರವಿಗೆ ಬಂದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ನಡುವೆ ವಾಗ್ವಾದ ಜೋರಾಯಿತು.
ವಿರೋಧ ಪಕ್ಷಗಳ ಸಂಸದರಾದ ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್, ಮನೀಷ್ ತಿವಾರಿ, ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ, ರೆವಲ್ಯೂಷನರಿ ಸೋಶಿಯಲಿಸ್ಟ್ ಪಾರ್ಟಿಯ ಎನ್.ಕೆ. ಪ್ರೇಮಚಂದ್ರನ್ ಅವರೂ ಮಸೂದೆ ವಿರುದ್ಧ ಆಕ್ರೋಶ ಹೊರಹಾಕಿದರು. ಉದ್ದೇಶಿತ ಮಸೂದೆಯು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿವೆ. ಅಷ್ಟಲ್ಲದೆ, ಕೇಂದ್ರ ಸರ್ಕಾರವು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ಸರ್ಕಾರಗಳನ್ನು ಗುರಿಯಾಗಿಸಿ ಈ ಮಸೂದೆ ಜಾರಿಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ವೇಣುಗೋಪಾಲ್ ಅವರು, ಗುಜರಾತ್‌ನಲ್ಲಿ 2002ರಲ್ಲಿ ಗಲಭೆ ನಡೆದ ಸಂದರ್ಭದಲ್ಲಿ ಆಗ ಅಲ್ಲಿ ಗೃಹ ಸಚಿವರಾಗಿದ್ದ ಅಮಿತ್ ಶಾ ಬಂಧನಕ್ಕೊಳಗಾಗಿದ್ದರು ಎಂದು ನೆನೆಪಿಸಿದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಅಮಿತ್ ಶಾ, ಅದೊಂದು ಸುಳ್ಳು ಪ್ರಕರಣವಾಗಿತ್ತು. ಆದಾಗ್ಯೂ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೆ ಎಂದು ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.