ADVERTISEMENT

ವಿವಿಧ ನ್ಯಾಯಮಂಡಳಿಗಳು ರದ್ದು: ಜಲವಿವಾದಕ್ಕೆ ಒಂದೇ ವೇದಿಕೆ

ಕಾಲಮಿತಿಯಲ್ಲಿ ತೀರ್ಪು: ತಿದ್ದುಪಡಿ ಮಸೂದೆಗೆ ಒಪ್ಪಿಗೆ

ಪಿಟಿಐ
Published 31 ಜುಲೈ 2019, 20:00 IST
Last Updated 31 ಜುಲೈ 2019, 20:00 IST
   

ನವದೆಹಲಿ: ರಾಜ್ಯಗಳ ನಡುವಣ ನದಿ ನೀರು ಹಂಚಿಕೆ ವಿವಾದಗಳ ಪರಿಹಾರ ಸುದೀರ್ಘ ಅವಧಿಗೆ ವಿಳಂಬವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೆಜ್ಜೆ ಇರಿಸಿದೆ.

ಅಂತರರಾಜ್ಯ ನದಿ ನೀರು ವಿವಾದಗಳ (ತಿದ್ದುಪಡಿ) ಮಸೂದೆಗೆ ಲೋಕಸಭೆ ಒಪ್ಪಿಗೆ ಕೊಟ್ಟಿದೆ. ವಿವಿಧ ರಾಜ್ಯಗಳ ನಡುವಣ ನದಿ ನೀರು ಹಂಚಿಕೆ ವಿವಾದಗಳ ಪರಿಹಾರಕ್ಕೆ ಒಂದೇ ನ್ಯಾಯಮಂಡಳಿ ಸ್ಥಾಪನೆ ಮತ್ತು ವಿವಾದ ಪರಿಹಾರಕ್ಕೆ ಕಟ್ಟುನಿಟ್ಟಾಗಿ ಸಮಯದ ಗಡುವು ನೀಡುವುದು ಈ ಮಸೂದೆಯ ಉದ್ದೇಶ.

ಈಗ ಇರುವ ನದಿ ನೀರು ವಿವಾದ ಪರಿಹಾರ ನ್ಯಾಯಮಂಡಳಿಗಳು ತಮ್ಮ ಉದ್ದೇಶದಲ್ಲಿ ವಿಫಲವಾಗಿವೆ. ಹಾಗಾಗಿ, ಹೊಸ ಧೋರಣೆ ಅನುಸರಿಸುವುದು ಅನಿವಾರ್ಯವಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಹೇಳಿದ್ದಾರೆ.

ADVERTISEMENT

35 ವರ್ಷಗಳಿಂದಲೂ ಪರಿಹಾರ ವಾಗದೇ ಇರುವ ನದಿ ನೀರು ಹಂಚಿಕೆ ವಿವಾದಗಳು ಇವೆ ಎಂದು ಅವರು ಹೇಳಿದರು.

ರಾಜ್ಯಗಳ ಜತೆ ಸಮಾಲೋಚನೆ ಮಾಡುವ ಅವಕಾಶ ಈ ಮಸೂದೆಯಲ್ಲಿ ಇಲ್ಲ. ಹಾಗಾಗಿ, ಇದು ಒಕ್ಕೂಟ ವ್ಯವಸ್ಥೆಗೆ ದೊಡ್ಡ ಹೊಡೆತ ಎಂದು ಕಾಂಗ್ರೆಸ್‌ ಮತ್ತು ಟಿಎಂಸಿ ಆರೋಪಿಸಿವೆ.

ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಸಚಿವರು, 2013ರಲ್ಲಿಯೇ ಕರಡು ಮಸೂದೆಯ ಬಗ್ಗೆ ರಾಜ್ಯಗಳ ಅಭಿಪ್ರಾಯ ಪಡೆಯಲಾಗಿದೆ. ಕರಡು ಮಸೂದೆಯನ್ನು ಪರಿಶೀಲನಾ ಸಮಿತಿಗೂ ಒಪ್ಪಿಸಲಾಗಿದೆ. ಮಸೂದೆ ಅಂತಿಮಗೊಳಿಸುವ ಮುನ್ನ ಸಮಿತಿಯ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದರು.

16ನೇ ಲೋಕಸಭೆಯ ಅವಧಿ ಮುಗಿದ ಕಾರಣ ಮಸೂದೆ ಅಸಿಂಧುವಾಗಿತ್ತು.

ಕಾವೇರಿ ನಿರ್ವಹಣಾ ಪ್ರಾಧಿಕಾರದ ಸ್ಥಿತಿಯು ಮಸೂದೆ ಅಂಗೀಕಾರದ ಬಳಿಕ ಏನಾಗಲಿದೆ ಎಂಬ ಪ್ರಶ್ನೆಯನ್ನು ಡಿಎಂಕೆ ಸದಸ್ಯ ದಯಾನಿಧಿ ಮಾರನ್‌ ಮುಂದಿಟ್ಟರು. ಇದಕ್ಕೆ ಶೇಖಾವತ್‌ ಅವರು ಸ್ಪಷ್ಟನೆ ಕೊಟ್ಟರು. ಮೂಲ ಕಾಯ್ದೆ ಅಡಿಯಲ್ಲಿ ಈಗಾಗಲೇ ರಚನೆಯಾಗಿರುವ ಯಾವುದೇ ಸಮಿತಿ ಅಥವಾ ಪ‍್ರಾಧಿಕಾರ ರದ್ದಾಗುವುದಿಲ್ಲ ಎಂದರು.

ಹೊಸ ವ್ಯವಸ್ಥೆಯ ಕೆಲಸ ಹೇಗೆ?

*ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನ್ಯಾಯಮಂಡಳಿಗೆ ಅಧ್ಯಕ್ಷರಾಗಿರುತ್ತಾರೆ

*ನ್ಯಾಯಮಂಡಳಿಯ ಅಡಿಯಲ್ಲಿ ಅಗತ್ಯ ಬಂದಾಗ ಪೀಠಗಳನ್ನು ರಚಿಸಲಾಗುತ್ತದೆ

*ವಿವಾದ ಪರಿಹಾರವಾದ ಕೂಡಲೇ ಪೀಠವು ರದ್ದಾಗುತ್ತದೆ

*ಯಾವುದೇ ವಿವಾದದ ಪರಿಹಾರಕ್ಕೆ ಪೀಠಕ್ಕೆ ಇರುವ ಗರಿಷ್ಠ ಅವಧಿ ಎರಡು ವರ್ಷ ಮಾತ್ರ

*ಪೀಠದ ಆದೇಶವಾದ ತಕ್ಷಣವೇ ಅದರ ಅಧಿಸೂಚನೆಯೂ ಹೊರಡುತ್ತದೆ

ಈ ವರೆಗಿನ ವ್ಯವಸ್ಥೆ ಏನು?

ಅಂತರ ರಾಜ್ಯ ನದಿ ನೀರು ಹಂಚಿಕೆ ವಿವಾದ ಪರಿಹಾರ ಕಾಯ್ದೆಯನ್ನು 1956ರಲ್ಲಿ ಅಂಗೀಕರಿಸಲಾಗಿತ್ತು. ಯಾವುದೇ ರಾಜ್ಯವು ತನ್ನ ಪಾಲಿನ ನದಿ ನೀರು ಸಿಕ್ಕಿಲ್ಲ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸುವುದಕ್ಕೆ ಅವಕಾಶ ಇದೆ. ಈ ತಕರಾರು ನೈಜ ಎಂದು ಕೇಂದ್ರಕ್ಕೆ ಮನವರಿಕೆ ಆದರೆ ನ್ಯಾಯಮಂಡಳಿ ರಚನೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.